ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ವಿರುದ್ಧದ ಧರಣಿ ನಾಲ್ಕನೇ ದಿನಕ್ಕೆ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ಎನ್ಐಟಿಕೆ ಅಕ್ರಮ ಟೋಲ್ ಗೇಟ್ ಸುಲಿಗೆಯ ವಿರುದ್ಧ ಆಶಿಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ, ಗುರುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಇಂದು ಮುಂಜಾನೆಯಿಂದಲೇ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು, ಟೋಲ್ ಗೇಟ್ ವಿರುದ್ಧದ ಹೋರಾಟದಲ್ಲಿ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಆಸಿಫ್ ಆಪತ್ಬಾಂಧವ ಅವರು ವಿಶೇಷವಾಗಿ ನೆಲದಲ್ಲಿ ಗುಂಡಿ ತೋಡಿ ನೀರು ಹಾಯಿಸಿ ಕೆಲ ತಾಸುಗಳ ಕಾಲ ಕೆಸರು ನೀರಿನಲ್ಲಿ ಕೂತು ವಿನೂತನವಾಗಿ ಪ್ರತಿಭಟಿಸಿ ಸಾರ್ವಜನಿಕರ ಗಮನ ಸೆಳೆದರು.
ಇಲ್ಲಿನ ಟೋಲ್ ಗೇಟ್ ಮುಚ್ಚುವವರೆಗೂ ಯಾವುದೇ ರೀತಿಯಲ್ಲೂ ಧರಣಿಯಿಂದ ಎದ್ದೇಳುವ ಪ್ರಶ್ನೆಯೇ ಇಲ್ಲ, ಕಳೆದ ಸೋಮವಾರದಿಂದ ಹಗಲು-ರಾತ್ರಿ ಟೋಲ್ ವಿರುದ್ಧ ಪ್ರತಿಭಟಿಸುತ್ತಿದ್ದೇನೆ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ನಮಗೆ ಸಹಕಾರ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಾ ಈ ಬಗ್ಗೆ ರಾಜ್ಯಾದ್ಯಂತ ಸಂಬಂಧಿಸಿದ ಇಲಾಖೆಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದುರು.