ಸಚಿವ ಈಶ್ವರಪ್ಪ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಲು ಮಾಜಿ ಸಚಿವ ಡಾ.ಮಹದೇವಪ್ಪ ಆಗ್ರಹ

ಬೆಂಗಳೂರು, ಫೆ. 10: ‘ದೇಶದ ವೈವಿಧ್ಯಮಯ ಜಾತಿ, ಮತ, ಪಂಗಡ ಮತ್ತು ಸಂಸ್ಕøತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ಅಮರತ್ವದ ಸಂಕೇತವೇ ನಮ್ಮ ರಾಷ್ಟ್ರಧ್ವಜ. ನಮ್ಮ ಸ್ವತಂತ್ರ್ಯ ದೇಶದ ಸಮಗ್ರತೆಯ ಮತ್ತು ಐಕ್ಯತೆಯ ಸಂಕೇತವಾಗಿರುವ ರಾಷ್ಟ್ರ ಧ್ವಜದ ಅವಹೇಳನ, ಅಗೌರವ ಮತ್ತು ಅಪ ನಂಬಿಕೆಯು ರಾಷ್ಟ್ರದ್ರೋಹವಾಗಿರುತ್ತದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಇನ್ನು ಭಾರತದ ಸಂವಿಧಾನ ಬದ್ಧವಾದ ತ್ರಿವರ್ಣ ಧ್ವಜದ ಉಳಿವಿಗಾಗಿ ಬಲಿದಾನಕ್ಕೂ ನಾವು ಸದಾ ಸಿದ್ಧವಾಗಿರಬೇಕು ಮತ್ತು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಭಾರತ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರು 1947ರ ಜುಲೈ 22ರಂದು ನಮ್ಮ ರಾಷ್ಟ್ರ ಧ್ವಜವನ್ನು ದೇಶಕ್ಕೆ ಅರ್ಪಿಸಿದರು. ಇಂದಿಗೂ ದೇಶದ ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಇನ್ನಿತರೆ ವಿಶೇಷ ಸಂದರ್ಭದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಬಳಸಲಾಗುತ್ತದೆ' ಎಂದು ತಿಳಿಸಿದ್ದಾರೆ.
‘ಈ ಹಿನ್ನೆಲೆಯಲ್ಲಿ ಭಾರತದ ದೇಶದ ಧ್ವಜದ ಮಹತ್ವ ಮತ್ತು ಅದರ ಇತಿಹಾಸ ತಿಳಿಯದೇ ಕೇಸರಿ ಧ್ವಜವನ್ನೇ ರಾಷ್ಟ್ರ ಧ್ವಜ ಮಾಡಲು ಹೊರಟಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಪೆÇಲೀಸರು ದೇಶದ್ರೋಹದ ಪ್ರಕರಣ ದಾಖಲಿಸಲಿ. ಜೊತೆಗೆ ಸಂವಿಧಾನ ಬದ್ಧವಾದ ರಾಷ್ಟ್ರೀಯ ಚಿಹ್ನೆಗಳನ್ನು ಅಗೌರವದಿಂದ ಕಾಣುತ್ತಿರುವುದಕ್ಕೆ ವಿಧಾನಸಭಾ ಸ್ಪೀಕರ್ ಅವರು, ಈಶ್ವರಪ್ಪ ಮೇಲೆ ಸದನದ ಒಳಗೆ ಕಠಿಣ ಕ್ರಮ ಜರುಗಿಸಲಿ' ಎಂದು ಮಹದೇವಪ್ಪ ಆಗ್ರಹಿಸಿದ್ದಾರೆ.
‘ಇನ್ನು ಚುನಾವಣೆ ಹತ್ತಿರ ಬಂತೆಂದರೆ ಬಿಜೆಪಿಗರಿಗೆ ದೇಶವೂ ಮುಖ್ಯವಲ್ಲ, ಜನರೂ ಮುಖ್ಯವಲ್ಲ ಎಂಬಂತಾಗಿದ್ದು ಇವರೊಳಗೆ ಸದಾ ಒಬ್ಬ ದೇಶದ್ರೋಹಿ ಅಡಗಿರುತ್ತಾನೆ ಎನ್ನುವುದಕ್ಕೆ ಈಶ್ವರಪ್ಪನವರ ಈ ಮಾತುಗಳೇ ಸಾಕ್ಷಿಯಾಗಿದೆ.ಭಾರತದ ಸಂವಿಧಾನಕ್ಕೆ ದುರುದ್ದೇಶಪೂರ್ವಕವಾಗಿಯೇ ಅಗೌರವ ಸೂಚಿಸುವ ಇಂತಹವರು ಜನಪ್ರತಿನಿಧಿ ಸ್ಥಾನದಲ್ಲಿರುವುದು ನಮ್ಮ ಪ್ರಜಾಪ್ರಭುತ್ವದ ದುರ್ದೈವ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಇಂದಿನ ಭಾರತೀಯ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು (ತಿರಂಗ) 1947ರ ಜುಲೈ 22ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯ ರಚನಾ ಸಭೆಯಲ್ಲಿ ಅನುಮೋದಿಸಲಾಯಿತು. ನಮ್ಮ ತ್ರಿವರ್ಣ ಧ್ವಜವು ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ನಾಲ್ಕು ರೇಖೆಗಳಿರುವ ನೀಲಿ ಬಣ್ಣದ ಅಶೋಕ ಚಕ್ರವಿದೆ' ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಭಾರತದ ದೇಶದ ಧ್ವಜದ ಮಹತ್ವ ಮತ್ತು ಅದರ ಇತಿಹಾಸ ತಿಳಿಯದೇ ಕೇಸರಿ ಧ್ವಜವನ್ನೇ ರಾಷ್ಟ್ರ ಧ್ವಜ ಮಾಡಲು ಹೊರಟಿರುವ ಸಚಿವ @ikseshwarappa ಅವರ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಲಿ ಎಂದು ಮೂಲಕ ಆಗ್ರಹಿಸುತ್ತೇನೆ!@BJP4Karnataka
— Dr H.C.Mahadevappa (@CMahadevappa) February 9, 2022
3/4







