ಹೋರಾಟಗಾರ ರೋನಾ ವಿಲ್ಸನ್ ರನ್ನು ಎರಡು ಪ್ರತ್ಯೇಕ ಹ್ಯಾಕರ್ ಗಳ ಗುಂಪು ಗುರಿ ಮಾಡಿತ್ತು: ವರದಿ

ಹೋರಾಟಗಾರ ರೋನಾ ವಿಲ್ಸನ್ (Photo:Dalit Camera/YouTube)
ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ರೋನಾ ವಿಲ್ಸನ್ ಅವರನ್ನು ಬಂಧಿಸುವುದಕ್ಕಿಂತ ಮುಂಚೆ ಎರಡು ಪ್ರತ್ಯೇಕ ಹ್ಯಾಕರ್ ಗಳ ಗುಂಪು ಟಾರ್ಗೆಟ್ ಮಾಡಿತ್ತು ಎಂದು ʼದಿ ವಾಷಿಂಗ್ಟನ್ ಪೋಸ್ಟ್ʼ ಗುರುವಾರ ವರದಿ ಮಾಡಿದೆ.
ಹ್ಯಾಕ್ ಮಾಡಿದ ಒಂದು ಗುಂಪನ್ನು ʼಮೋಡಿಫೈಡ್ಎಲಿಫೆಂಟ್ʼ ಎಂದು ಕರೆಯಲಾಗುತ್ತಿದೆ ಹಾಗೂ ವಿಲ್ಸನ್ ಅವರ ಸಾಧನದಲ್ಲಿ ದಾಖಲೆಗಳನ್ನು ಇರಿಸಿತ್ತು ಎಂದು ಕ್ಯಾಲಿಫೋರ್ನಿಯಾ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ಸೆಂಟಿನಲ್ಒನ್ ವರದಿಯ ಆಧಾರದಲ್ಲಿ ʼವಾಷಿಂಗ್ಟನ್ ಪೋಸ್ಟ್ʼ ವರದಿ ಮಾಡಿದೆ
ವಿಲ್ಸನ್ ಅವರ ಸಾಧನವನ್ನು ಟಾರ್ಗೆಟ್ ಮಾಡಿದ ಇನ್ನೊಂದು ಹ್ಯಾಕಿಂಗ್ ಗ್ರೂಪ್ ಸೈಡ್ವೈಂಡರ್ ಎಂದಾಗಿದೆ ಎಂದು ವರದಿ ಹೇಳಿದೆ. ಎರಡು ಪ್ರತ್ಯೇಕ ಗುಂಪುಗಳು ಒಂದೇ ವ್ಯಕ್ತಿಯನ್ನು ಟಾರ್ಗೆಟ್ ಮಾಡಿರುವುದನ್ನು ನೋಡಿದರೆ ಅವರಿಗೆ ಆ ಕೆಲಸವನ್ನು ಒಂದೇ ಸಂಸ್ಥೆ ಒದಗಿಸಿತ್ತು ಎಂದು ತಿಳಿದು ಬರುತ್ತದೆ ಎಂದು ಸೆಂಟಿನಲ್ವನ್ ವರದಿಯ ಸಹಲೇಖಕ ಆಂಡ್ರೆಸ್-ಗುವೆರ್ರೋ ಸಾಡೆ ಅವರ ಮಾತುಗಳನ್ನು ವಾಷಿಂಗ್ಟನ್ ಪೋಸ್ಟ್ ಉಲ್ಲೇಖಿಸಿದೆ.
ವಿಲ್ಸನ್ ಅವರಿಗೆ ಬಂದ ಹಲವು ಇಮೇಲ್ಗಳಲ್ಲಿ ಕೆಲವು ಸುದ್ದಿ ಲೇಖನಗಳ ಸೋಗಿನಲ್ಲಿ ಕಂಪ್ಯೂಟರ್ ನಲ್ಲಿ ಮಾಲ್ವೇರ್ ಅಳವಡಿಸಿವೆ ಎಂದು ಹೇಳಲಾಗಿದೆ.
ವಿಲ್ಸನ್ ಅವರ ಲ್ಯಾಪ್ಟಾಪ್ನಲ್ಲಿ ಕನಿಷ್ಠ 10 ಪತ್ರಗಳನ್ನು ಮಾಲ್ವೇರ್ ಮೂಲಕ ಹ್ಯಾಕರ್ ಒಬ್ಬ ಸೇರಿಸಿದ್ದ ಎಂದು ಅಮೆರಿಕಾದ ಆರ್ಸೆನೆಲ್ ಕನ್ಸಲ್ಟಿಂಗ್ ಫೆಬ್ರವರಿ 2021ರಲ್ಲಿ ವರದಿ ಮಾಡಿತ್ತು. ಶಸ್ತ್ರಾಸ್ತ್ರಗಳ ಅಗತ್ಯ ಮತ್ತು ನಿಷೇಧಿತ ಮಾವೋವಾದಿ ಗುಂಪಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆಗೈಯ್ಯುವಂತೆ ಆಗ್ರಹಿಸಿ ಮಾವೋವಾದಿಯೊಬ್ಬರಿಗೆ ಬರೆಯಲಾಗಿದೆಯೆನ್ನಲಾದ ಪತ್ರವೂ ಇದರಲ್ಲಿ ಸೇರಿದೆ ಎಂದು ವರದಿಯಾಗಿದೆ.







