ಬಝ್ಮೆ ನಿಸ್ವಾನ್ ಟ್ರಸ್ಟ್: 3613 ವಿದ್ಯಾರ್ಥಿನಿಯರಿಗೆ 1.32 ಕೋಟಿ ರೂ.ವಿದ್ಯಾರ್ಥಿವೇತನ

ಬೆಂಗಳೂರು, ಫೆ.10: ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 3613 ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ 1.32 ಕೋಟಿ ರೂ.ಗಳ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಲಾಯಿತು.
ಗುರುವಾರ ನಗರದ ಸೆಂಟ್ ಮಾಕ್ರ್ಸ್ ರಸ್ತೆಯಲ್ಲಿರುವ ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಹುಸ್ನಾ ಶರೀಫ್ ವಿದ್ಯಾರ್ಥಿವೇತನವನ್ನು ವಿತರಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಂಸ್ಥೆಯು ಬಝ್ಮೆ ನಿಸ್ವಾನ್ ಆನ್‍ಲೈನ್ ಸಾಫ್ಟ್‍ವೇರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿ, ಕಳೆದ ಸಾಲಿನ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ(60 ದಿನ) ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 4505 ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು ಎಂದು ಅವರು ಹೇಳಿದರು.
4505 ಅರ್ಜಿಗಳ ಪೈಕಿ ವಿದ್ಯಾರ್ಥಿನಿಯರ ಶೈಕ್ಷಣಿಕ ದಾಖಲಾತಿಗಳು ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ 3613 ವಿದ್ಯಾರ್ಥಿನಿಯರನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ. ಈ ಪೈಕಿ 1731 ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, 65 ಡಿಪ್ಲೊಮಾ ಕೋರ್ಸ್, 1722 ಪದವಿ ವಿದ್ಯಾರ್ಥಿನಿಯರು ಹಾಗೂ 95 ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿದ್ದಾರೆ ಎಂದು ಹುಸ್ನಾ ಶರೀಫ್ ತಿಳಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ 1971ರಲ್ಲಿ ಬೆಂಗಳೂರು ನಗರದಲ್ಲಿ ನೋಂದಣಿಯಾದ ನಮ್ಮ ಸಂಸ್ಥೆಯು ಈವರೆಗೆ 63 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಿದೆ ಎಂದು ಹುಸ್ನಾ ಶರೀಫ್ ತಿಳಿಸಿದರು.
ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿವೇತನವನ್ನು ಪಡೆದಂತಹ ಹಲವಾರು ಹೆಣ್ಣು ಮಕ್ಕಳು ಶಿಕ್ಷಕರು, ಪ್ರಾಧ್ಯಾಪಕರು, ವೈದ್ಯರು, ವಕೀಲರು, ಸರಕಾರಿ ಅಧಿಕಾರಿಗಳು, ಉದ್ಯಮಿಗಳು, ಎಂಜಿನಿಯರ್‍ಗಳು, ಪತ್ರಕರ್ತರು, ತರಬೇತುದಾರರು, ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅನೇಕ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಗ್ಮಾ ಫೌಂಡೇಶನ್ ಮುಖ್ಯಸ್ಥ ಅಮೀನ್ ಮುದಸ್ಸರ್, ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ಜಂಟಿ ಕಾರ್ಯದರ್ಶಿ ಸಯ್ಯದಾ ರಹಮತ್ ಬಾನು, ಟ್ರಸ್ಟಿ ಪರ್ವೀನ್ ಸುಲ್ತಾನಾ ಉಪಸ್ಥಿತರಿದ್ದರು.








