ಮೊದಲ ಹಂತದಲ್ಲಿ 10ನೇ ತರಗತಿ ವರೆಗೆ ಫೆ.14ರಿಂದ ಶಾಲೆ ಆರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಫೆ.10: ಶಾಲಾ, ಕಾಲೇಜುಗಳಲ್ಲಿನ ಸಮವಸ್ತ್ರದ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠದ ಸೂಚನೆ ಹಿನ್ನೆಲೆಯಲ್ಲಿ ಸೋಮವಾರ(ಫೆ.14)ದಿಂದ ರಾಜ್ಯಾದ್ಯಂತ 10ನೆ ತರಗತಿವರೆಗೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎರಡನೆ ಹಂತದಲ್ಲಿ ಪಿಯುಸಿ ಹಾಗೂ ಪದವಿ ಕಾಲೇಜುಗಳು ಆರಂಭ ಮಾಡುವುದರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾಳೆ ಸಂಜೆ ಎಲ್ಲ ಸಚಿವರು ಒಟ್ಟಿಗೆ ಐದು ಗಂಟೆಗೆ ಎಲ್ಲ ಜಿಲ್ಲಾಧಿಕಾರಿಗಳು, ಎಸ್ಪಿಗಳು, ಡಿಡಿಪಿಐ, ಜಿ.ಪಂ.ಸಿಇಒ ಅವರನ್ನೊಳಗೊಂಡಂತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಆಯಾ ಜಿಲ್ಲೆಗಳಲ್ಲಿನ ವಾಸ್ತವ ಪರಿಸ್ಥಿತಿ ಕುರಿತು ವಿವರ ಪಡೆದುಕೊಂಡು ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಎಲ್ಲ ಹಿರಿಯ ಅಧಿಕಾರಿಗಳೊಂದಿಗೆ ನಾನು, ಗೃಹ ಸಚಿವರು, ಶಿಕ್ಷಣ ಸಚಿವರು ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಹಿರಿಯ ಅಧಿಕಾರಿಗಳು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಶಿಕ್ಷಣ ಇಲಾಖೆಯವರು ನಾಳೆ ಬೆಳಗ್ಗೆಯೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಾರೆ. ಗೃಹ ಇಲಾಖೆಯವರು ಎಸ್ಪಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಹೈಕೋರ್ಟ್ ಆದೇಶ ಬರುವವರೆಗೆ ಶಾಂತಿ ಸುವ್ಯವಸ್ಥೆ ಹಾಗೂ ಶಿಕ್ಷಣ ಮುಂದುವರೆಯುವಂತೆ ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ಎರಡು ದಿನಗಳಿಂದ ಯಾವುದೆ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ, ಹೊರಗಿನವರ ಪ್ರಚೋದನೆ ಕೆಲವು ಕಡೆ ನಡೆದಿದೆ. ಸದ್ಯಕ್ಕೆ ಶಾಲೆ, ಕಾಲೇಜುಗಳ ಆವರಣದಲ್ಲಿ ಎಲ್ಲರೂ ಸಂಯಮದಿಂದ ವರ್ತಿಸುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿಗೆ ಪ್ರೀತಿದಾಯಕ ಧನ್ಯವಾದಗಳನ್ನು ಹೇಳಲು ಇಚ್ಛೆ ಪಡುತ್ತೇನೆ ಎಂದು ಅವರು ಹೇಳಿದರು.
ಹೈಕೋರ್ಟ್ ತ್ರಿಸದಸ್ಯ ಪೀಠ ಪ್ರತಿ ದಿನ ಈ ಸಂಬಂಧ ವಿಚಾರಣೆ ಮಾಡುವುದಾಗಿ ತಿಳಿಸಿದೆ. ಅಲ್ಲದೆ, ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಬೇಕು ಹಾಗೂ ಕಾಲೇಜಿನಲ್ಲಿ ಯಾವುದೆ ಧಾರ್ಮಿಕತೆಯನ್ನು ಬಿಂಬಿಸುವಂತಹ ಧಿರಿಸು ಹಾಕಿಕೊಂಡು ಬರದಂತೆ ಸೂಚನೆಯನ್ನು ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಶಾಲಾ, ಕಾಲೇಜುಗಳ ಆವರಣದಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಮಕ್ಕಳು ಭೇದಭಾವವಿಲ್ಲದೆ ಒಗ್ಗಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಸರಕಾರದ ಜವಾಬ್ದಾರಿ ಇದೆ. ಹೀಗಾಗಿ, ನಾವೆಲ್ಲ ಚರ್ಚೆಯನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.
ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







