ಉಡುಪಿಯ ಕಾಲೇಜಿನಲ್ಲಿ ಕೇಸರಿಧಾರಿ ವಿದ್ಯಾರ್ಥಿಗಳನ್ನು ಹಿಂದುತ್ವ ಗುಂಪು ಸಜ್ಜುಗೊಳಿಸಿದ್ದು ಹೇಗೆ?
thenewsminute.com ತನಿಖಾ ವರದಿ
Photo: thenewsminute.com
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕೇಸರಿ ಶಾಲು ಮತ್ತು ರುಮಾಲು ಧರಿಸಿದ್ದ ವಿದ್ಯಾರ್ಥಿಗಳು ಹಿಜಾಬ್ ಧಾರಿ ವಿದ್ಯಾರ್ಥಿನಿಯರ ವಿರುದ್ಧ ಪ್ರತಿಭಟನೆ ನಡೆಸುವ ಎರಡು ದಿನಗಳ ಮುನ್ನ ಅವರಿಗೆ ಸಂದೇಶವೊಂದನ್ನು ವಿತರಿಸಲಾಗಿತ್ತು.
ಉಡುಪಿಯ ಹಿಂದು ಜಾಗರಣಾ ವೇದಿಕೆಯು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ವಿರುದ್ಧ ಪ್ರತಿಭಟನೆ ನಡೆಸುವಂತೆ ಅವರನ್ನು ಪ್ರಚೋದಿಸಿತ್ತು ಮತ್ತು ಅವರಿಗೆ ಕೇಸರಿ ಶಾಲುಗಳು ಮತ್ತು ರುಮಾಲುಗಳನ್ನು ಒದಗಿಸಿತ್ತು ಎಂದು ಟಿಎನ್ಎಂ (thenewsminute.com) ತನಿಖಾ ವರದಿ ಮಾಡಿದೆ.
ಮಂಗಳವಾರ, ಫೆ,8ರಂದು 100ಕ್ಕೂ ಅಧಿಕ ಕೇಸರಿಧಾರಿ ವಿದ್ಯಾರ್ಥಿಗಳು ಮತ್ತು ಹಿಜಾಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪೊಂದರ ನಡುವೆ ಸಂಘರ್ಷಕ್ಕೆ ಎಂಜಿಎಂ ಕಾಲೇಜು ಸಾಕ್ಷಿಯಾಗಿತ್ತು. ಅಂದ ಹಾಗೆ ಇದು ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ನಾಂದಿ ಹಾಡಿದ ಮೊದಲ ಕಾಲೇಜು ಅಲ್ಲ. ಉಡುಪಿಯ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿಯ ಬೆಳವಣಿಗೆಗಳನ್ನು ಕಂಡ ಬಳಿಕ ಈ ವಿಷಯವನ್ನು ಕೈಗೆತ್ತಿಕೊಳ್ಳಲು ತಾವು ನಿರ್ಧರಿಸಿದ್ದಾಗಿ ಟಿಎನ್ಎಂ ಜೊತೆ ಮಾತನಾಡಿದ ಕೇಸರಿಧಾರಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಿಳಿಸಿದರು. ಆದಾಗ್ಯೂ ಪ್ರತಿಭಟನೆಗಳು ದಿಢೀರ್ ನಡೆದಿದ್ದಲ್ಲ ಮತ್ತು ಹಿಂದು ಜಾಗರಣಾ ವೇದಿಕೆ (ಹಿಂಜಾವೇ)ಯು ಕೇಸರಿ ಶಾಲುಗಳು ಮತ್ತು ರುಮಾಲುಗಳನ್ನು ವಿತರಿಸಿತ್ತು ಎನ್ನುವುದು ಟಿಎನ್ಎಂ ತನಿಖೆಯಿಂದ ಬಹಿರಂಗಗೊಂಡಿದೆ.
ಅಜ್ಞಾತ ಸಂಘಟಕರ ಸಂದೇಶ ಮಂಗಳವಾರದ ಸಂಘರ್ಷಕ್ಕೆ ಕನಿಷ್ಠ ಎರಡು ದಿನಗಳ ಮೊದಲು ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಗೆ ರವಾನಿಸಲಾಗಿದ್ದ ಸಂದೇಶವೊಂದು ಟಿಎನ್ಎಂಗೆ ಲಭ್ಯವಾಗಿದೆ.
(Photo credit: thenewsminute.com)
‘ಈಗಾಗಲೇ ಉಡುಪಿಯ ಎಲ್ಲ ಕಾಲೇಜುಗಳಲ್ಲಿ ಹಿಜಾಬ್ ವಿವಾದವು ಗಂಭೀರ ವಿಷಯವಾಗಿದೆ. ಸಣ್ಣ ಬಟ್ಟೆಯ ತುಂಡನ್ನು ಬಾಯಿ ಸುತ್ತ ಕಟ್ಟಿಕೊಳ್ಳುವ ಬಗ್ಗೆ ಒಂದು ತಿಂಗಳಿಂದ ಮುಸ್ಲಿಂ ವಿದ್ಯಾರ್ಥಿಗಳು ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ ’ ಎಂದು ವಿದ್ಯಾರ್ಥಿಗಳಿಗೆ ರವಾನಿಸಲಾಗಿರುವ ಸಂದೇಶದಲ್ಲಿ ಹೇಳಲಾಗಿದೆ. ‘ಈ ಹಿಜಾಬ್ ಸಮಸ್ಯೆ ಎಂಜಿಎಂ ಕಾಲೇಜಿನಲ್ಲಿಯೂ ಎನ್ನುವುದು ನಮಗೆ ತಿಳಿದಿದೆ. ನಮ್ಮ ಕಾಲೇಜಿನಲ್ಲಿಯೂ ಪ್ರಸಕ್ತ ಶೈಕ್ಷಣಿಕ ವರ್ಷದೊಳಗೇ ಈ ಹಿಜಾಬ್ ಸಮಸ್ಯೆಯನ್ನು ಅಂತ್ಯಗೊಳಿಸುವ ಅಗತ್ಯವಿದೆ ಮತ್ತು ಏಕರೂಪತೆಯನ್ನು ಕಾಪಾಡಲು ನಾವೆಲ್ಲರೂ ಹೋರಾಡಬೇಕಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲುಗಳನ್ನು ಕಡ್ಡಾಯವಾಗಿ ತರಬೇಕು ಮತ್ತು ಅವುಗಳನ್ನು ಹೆಗಲ ಮೇಲೆ ಹಾಕಿಕೊಂಡು ಕಾಲೇಜನ್ನು ಪ್ರವೇಶಿಸುವಂತೆ ಸಂಘಟಕರು ಸೂಚನೆಯನ್ನು ರವಾನಿಸುವವರೆಗೆ ಅವುಗಳನ್ನು ತಮ್ಮ ಬ್ಯಾಗಿನಲ್ಲಿಟ್ಟುಕೊಳ್ಳಬೇಕು’ ಎಂಬ ಸಂದೇಶವು ‘ಜೈ ಶ್ರೀರಾಮ’ ಘೋಷಣೆಯೊಂದಿಗೆ ಕೊನೆಗೊಂಡಿತ್ತು.
‘ಸಂದೇಶವನ್ನು ರವಾನಿಸಿದ್ದು ಯಾರು ಎನ್ನುವುದು ನಮಗೆ ತಿಳಿದಿಲ್ಲ, ಆದರೆ ಅದು ಕಾಲೇಜಿನ ಹೊರಗಿನಿಂದ ಬಂದಿತ್ತು’ ಎಂದು ಹೆಸರು ಹೇಳಿಕೊಳ್ಳಲು ಬಯಸದ, ಕಾಲೇಜಿಗೆ ನಿಕಟವಾಗಿರುವ ವ್ಯಕ್ತಿಯೋರ್ವರು ತಿಳಿಸಿದರು. ಈ ಸಂದೇಶಗಳನ್ನು ಎಲ್ಲ ತರಗತಿಗಳ ಗುಂಪುಗಳ, ವಿಶೇಷವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ನಡುವೆ ಶೇರ್ ಮಾಡಿಕೊಳ್ಳಲಾಗಿತ್ತು ಎಂದು ಮೂಲವು ತಿಳಿಸಿದೆ ಎಂದು thenewsminute.com ವರದಿ ಮಾಡಿದೆ.
ಪ್ರತಿಭಟನೆಗಳ ಚಿತ್ರಗಳನ್ನು ವಿಶ್ಲೇಷಿಸುವ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ಮಾತನಾಡಿಸುವ ಮೂಲಕ ಮಂಗಳವಾರ ಬೆಳಿಗ್ಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸುವಂತೆ ಮಾಡುವಲ್ಲಿ ಹಿಂಜಾವೇ ಪ್ರಮುಖ ಪಾತ್ರ ವಹಿಸಿತ್ತು ಎನ್ನುವುದನ್ನು ಟಿಎನ್ಎಂ ಖಚಿತಪಡಿಸಿಕೊಂಡಿದೆ.
ʼಪ್ರತಿಭಟನೆಯಲ್ಲಿ ಹಾಜರಿದ್ದ ಬಿಜೆಪಿ ಮುಖಂಡ, ಕಾಲೇಜಿನ ಹೊರಗಿದ್ದ ಹಿಂಜಾವೇ ಕಾರ್ಯಕರ್ತರುʼ
ಸೋಮವಾರ ಎಂಜಿಎಂ ಕಾಲೇಜಿನಲ್ಲಿ ಯಾವುದೇ ಪ್ರತಿಭಟನೆ ನಡೆದಿರಲಿಲ್ಲ, ಮಂಗಳವಾರ ಬೆಳಿಗ್ಗೆ ಕೇಸರಿಧಾರಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರೊಂದಿಗೆ ಸಂಘರ್ಷಕ್ಕಿಳಿದಿದ್ದರು. ಈ ಸಂದರ್ಭ ಗುಂಪಿನಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಘೋಷಣೆಗಳನ್ನು ಕೂಗುತ್ತಿದ್ದರು. ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಸಂಘರ್ಷವನ್ನು ತಿಳಿಗೊಳಿಸಲು ಮತ್ತು ವಿದ್ಯಾರ್ಥಿಗಳನ್ನು ಚದುರಿಸಲು ಎಂಜಿಎಂ ಕಾಲೇಜು ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಹಲವಾರು ಕೇಸರಿಧಾರಿ ವಿದ್ಯಾರ್ಥಿಗಳು ಪ್ರತಿಭಟನೆ ಸಂದರ್ಭ ತಾವು ಧರಿಸಿದ್ದ ಕೇಸರಿ ಶಾಲುಗಳನ್ನು ಕಾಲೇಜು ಪಕ್ಕದಲ್ಲಿರುವ ಅಜ್ಜಮ್ಮ ಕೆಫೆಯಲ್ಲಿ ಕಾಯುತ್ತಿದ್ದ ಹಿಂಜಾವೇ ಕಾರ್ಯಕರ್ತರಿಗೆ ಮರಳಿಸುತ್ತಿದ್ದುದು ಕಂಡುಬಂದಿತ್ತು. ಅಜ್ಜಮ್ಮ ಕೆಫೆಯಲ್ಲಿ ಹಿಂಜಾವೇ ವಿಭಾಗೀಯ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ ಅವರೂ ಇದ್ದರು. ಎಂಜಿಎಂ ಕಾಲೇಜಿನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ನಡುವಿನ ಸಂಘರ್ಷದಲ್ಲಿ ಹಿಂಜಾವೇ ಪಾತ್ರದ ಕುರಿತು ಟಿಎನ್ಎಂ ಪ್ರಶ್ನಿಸಿದಾಗ ‘ಉಡುಪಿಯಲ್ಲಿ ಕೋಮುವಾದಿ ಸಂಘಟನೆಗಳು ಹಿಜಾಬ್ ವಿಷಯ ಕುರಿತು ಸೌಹಾರ್ದವನ್ನು ಕೆಡಿಸಲು ಮತ್ತು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ ಮತ್ತು ನಾವು ಅದನ್ನು ವಿರೋಧಿಸುತ್ತಿದ್ದೇವೆ ’ ಎಂದು ಕುಕ್ಕೆಹಳ್ಳಿ ಉತ್ತರಿಸಿದರು ಎಂದು thenewsminute.com ವರದಿ ಮಾಡಿದೆ.
ಹಿಂಜಾವೇ ಕಾರ್ಯಕರ್ತರು ಮಂಗಳವಾರ ಎಂಜಿಎಂ ಕಾಲೇಜು ಬಳಿಯಲ್ಲಿ ಏಕಿದ್ದರು ಎಂದು ಪ್ರಶ್ನಿಸಿದಾಗ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ್, ಹಿಂಜಾವೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿತ್ತು ಎನ್ನುವುದನ್ನು ನಿರಾಕರಿಸಿದರು. ‘ಇಲ್ಲಿಯವರೆಗೆ ನಡೆದಿದ್ದನ್ನೆಲ್ಲ ವಿದ್ಯಾರ್ಥಿಗಳೇ ಮಾಡಿದ್ದಾರೆ, ಇದರಲ್ಲಿ ನಮ್ಮ ಪಾತ್ರವೇನಿಲ್ಲ. ಶಾಲನ್ನು ಖರೀದಿಸಲು ಹಣವಿಲ್ಲದವರು ಯಾರೂ ಇಲ್ಲ, ವಿದ್ಯಾರ್ಥಿಗಳೇ ಅದನ್ನು ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಏನು ಮಾಡಬಲ್ಲರು ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ’ ಎಂದರು.
ಆದಾಗ್ಯೂ ಹಿಂಜಾವೇ ಕಳೆದ ವರ್ಷದ ಅಕ್ಟೋಬರ್ನಲ್ಲಿ ಆಯೋಜಿಸಿದ್ದ ‘ದುರ್ಗಾ ದೌಡ್’ನಲ್ಲಿ ಬಳಕೆಯಾಗಿದ್ದ ಶಾಲುಗಳು ಮತ್ತು ರುಮಾಲುಗಳನ್ನೇ ವಿದ್ಯಾರ್ಥಿಗಳು ಧರಿಸಿದ್ದರು. ವಿದ್ಯಾರ್ಥಿಯೋರ್ವ ಇದನ್ನು ಟಿಎನ್ಎಂಗೆ ತಿಳಿಸಿದ್ದಾನೆ.
ವಾಸ್ತವದಲ್ಲಿ ವಿದ್ಯಾರ್ಥಿಗಳನ್ನು ಚದುರಿಸಿದ ಬಳಿಕ ಹಿಂಜಾವೇ ಕಾರ್ಯಕರ್ತರು ಪ್ರತಿಭಟನಾನಿರತ ವಿದ್ಯಾರ್ಥಿಗಳಿಂದ ಶಾಲುಗಳನ್ನು ಮತ್ತು ರುಮಾಲುಗಳನ್ನು ವಾಪಸ್ ಪಡೆದು ಒಯ್ದಿದ್ದನ್ನು ಸ್ವತಃ ಈ ವರದಿಗಾರ ನೋಡಿದ್ದಾನೆ. ಶಾಲುಗಳು ಮತ್ತು ರುಮಾಲುಗಳನ್ನು ಮರಳಿ ಸಂಗ್ರಹಿಸಿದ್ದನ್ನು ಬೂಮ್ ಲೈವ್ನ ನಿವೇದಿತಾ ನಿರಂಜನಕುಮಾರ ಅವರೂ ದಾಖಲಿಸಿದ್ದಾರೆ.
ಟಿಎನ್ಎಂ ಜೊತೆ ಮಾತನಾಡಿದ ಪ್ರತಿಭಟನಾ ನಿರತ ವಿದ್ಯಾರ್ಥಿಯೋರ್ವ, ‘ನಾವು ಸೋಮವಾರವೂ ಶಾಲುಗಳನ್ನು ತಂದಿದ್ದೆವು. ಪ್ರಾಂಶುಪಾಲರ ಜೊತೆ ಮಾತನಾಡಿ, ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಲ್ಲಿಸುವಂತೆ ಕೋರಿದೆವು. ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಹಿಜಾಬ್ ಗಳನ್ನು ತೆಗೆಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಹಿಜಾಬ್ ಧರಿಸುವುದು ಮುಂದುವರಿದಿದೆ. ಹೀಗಾಗಿ ನಾವು ಪ್ರತಿಭಟಿಸುತ್ತಿದ್ದೇವೆ’ ಎಂದು ತಿಳಿಸಿದ. ತಾನು ಎಬಿವಿಪಿ ಸದಸ್ಯ ಎನ್ನುವುದನ್ನೂ ಆತ ದೃಢಪಡಿಸಿದ.
ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿಯರು ಕಳೆದ ವಾರದವರೆಗೂ ಮುಕ್ತವಾಗಿ ಹಿಜಾಬ್ ಗಳನ್ನು ಧರಿಸುತ್ತಿದ್ದರು ಎಂದು ಟಿಎನ್ಎಂ ಜೊತೆ ಮಾತನಾಡಿದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ತಿಳಿಸಿದರು.
2011-13ರ ಅವಧಿಯಲ್ಲಿ ತಾನು ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೂ ವಿದ್ಯಾರ್ಥಿನಿಯರು ಮುಕ್ತವಾಗಿ ಹಿಜಾಬ್ ಧರಿಸುತ್ತಿದ್ದರು. ತನ್ನ ತರಗತಿಯಲ್ಲೂ ಹಿಜಾಬ್ ಧರಿಸುತ್ತಿದ್ದ ವಿದ್ಯಾರ್ಥಿನಿಯರಿದ್ದರು. ಈವರೆಗೂ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿರಲಿಲ್ಲ ಎಂದು ಹಳೆಯ ವಿದ್ಯಾರ್ಥಿ ಅರ್ನವ್ ಅಮೀನ್ ತಿಳಿಸಿದರು.
ಉಡುಪಿಯಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿಜಾಬ್ಧಾರಿ ವಿದ್ಯಾರ್ಥಿನಿಯರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಸಂಘಟಿಸಿದೆ ಎಂದು ಉಡುಪಿ ಬಿಜೆಪಿ ಮತ್ತು ಹಿಂಜಾವೇ ಆರೋಪಿಸಿದೆ. ‘ಹಿಜಾಬ್ ಧರಿಸಿದ್ದಕ್ಕಾಗಿ ತರಗತಿಗಳಿಗೆ ಪ್ರವೇಶವನ್ನು ನಿಷೇಧಿಸಿದ ಬಳಿಕ ನಾವು ಉಡುಪಿಯ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯರ ವ್ಯಕ್ತಿಗತ ಹಕ್ಕುಗಳನ್ನು ಬೆಂಬಲಿಸುತ್ತಿದ್ದೇವೆ ’ ಎಂದು ಹೇಳಿದ ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ, ‘ಇದು ಸಿಎಫ್ಐನ ಆಂದೋಲನ ಎಂದು ಹೇಳಲಾಗುತ್ತಿದೆ, ಆದರೆ ಅದು ನಿಜವಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭ ಬಿಜೆಪಿ ನಾಯಕ ಯಶಪಾಲ್ ಸುವರ್ಣ ಅಲ್ಲೇನು ಮಾಡುತ್ತಿದ್ದರು ಎಂದು ಕೇಳಲು ನಾವು ಬಯಸುತ್ತೇವೆ. ಅವರು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ ’ ಎಂದರು.
#Watch: MGM college students in #Udupi, #Karnataka return the orange turbans allegedly distributed by the Hindu Jagrana Vedike for the protest against students wearing Hijab. Shot by our reporter @BombayBombil#HijabRow #BOOMReports pic.twitter.com/p83mKUotCx
— BOOM Live (@boomlive_in) February 8, 2022