ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ದಾಖಲೆಗಳು ಸೋರಿಕೆ: ಎಸ್ಪಿಗೆ ದೂರು
ತನಿಖೆ ನಡೆಸಿ ಕ್ರಮ ಜರಗಿಸುವಂತೆ ಪೋಷಕರಿಂದ ಒತ್ತಾಯ
ಫೈಲ್ ಫೋಟೊ
ಉಡುಪಿ, ಫೆ.10: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ದಾಖಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿರುವ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರ ಪೋಷಕರು ಇಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ವಿದ್ಯಾರ್ಥಿನಿಯರ ದಾಖಲಾತಿ ಅರ್ಜಿಯ ಪ್ರತಿ, ನಿಯಮಾವಳಿ ಪಾಲನೆ ಬಗ್ಗೆ ತಿಳುವಳಿಕೆ ಪತ್ರ, ಅಂಕ ಪಟ್ಟಿ, ವಿಳಾಸ, ಮೊಬೈಲ್ ನಂಬರ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಲಾಗಿದ್ದು, ಈ ವಿಚಾರಗಳು ಮಾಧ್ಯಮಗಳಲ್ಲೂ ಪ್ರಸಾರಗೊಂಡಿವೆ. ಇದರಿಂದ ಮಕ್ಕಳಿಗೆ ಬೆದರಿಕೆ ಕರೆಗಳು ಬರುವ ಭೀತಿ ಎದುರಾಗಿದೆ. ಆದುದರಿಂದ ಈ ದಾಖಲಾತಿ ಗಳನ್ನು ಸೋರಿಕೆ ಮಾಡಿರುವ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಇಬ್ಬರು ವಿದ್ಯಾರ್ಥಿನಿಯರ ಪೋಷಕರು ಎಸ್ಪಿಗೆ ನೀಡಿ ರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ಪೋಷಕರೊಬ್ಬರು, ‘ನಮ್ಮ ಮಕ್ಕಳು ಕಾಲೇಜು ದಾಖಲಾತಿ ಸಂದರ್ಭದಲ್ಲಿ ನೀಡಿರುವ ಎಲ್ಲ ದಾಖಲೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಮಕ್ಕಳಿಗೆ ಬೆದರಿಕೆ ಕರೆಗಳು ಬರುವ ಸಾಧ್ಯತೆಗಳು ಕೂಡ ಇವೆ. ಹೀಗಾಗಿ ಅವರೆಲ್ಲ ಭಯಭೀತರಾಗಿದ್ದಾರೆ. ಈ ರೀತಿ ವೈಯಕ್ತಿಕ ದಾಖಲೆ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸರಿಯಲ್ಲ. ಈ ಬಗ್ಗೆ ನಾವು ದಾಖಲೆ ಸಮೇತರಾಗಿ ಮಕ್ಕಳ ಕಲ್ಯಾಣ ಸಮಿತಿಗೂ ದೂರು ನೀಡಲಿದ್ದೇವೆ’ ಎಂದು ಹೇಳಿದರು.
''ಇಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಇಬ್ಬರು ಪೋಷಕರು ಬಂದು, ಮಕ್ಕಳ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದ್ದಾರೆಂದು ಲಿಖಿತವಾಗಿ ದೂರು ನೀಡಿದ್ದಾರೆ. ಆದರೆ ಅದರಲ್ಲಿ ದಾಖಲೆಗಳನ್ನು ಅವರು ಸಲ್ಲಿಸಿಲ್ಲ. ಆ ವಿವರ ಸಲ್ಲಿಸುವುದಾಗಿ ಹೇಳಿದ್ದಾರೆ. ಮುಂದೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು''
-ಎನ್.ವಿಷ್ಣುವರ್ಧನ್, ಎಸ್ಪಿ, ಉಡುಪಿ
''ನಮ್ಮ ವೈಯಕ್ತಿಕ ಮಾಹಿತಿಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗಪಡಿಸಿರುವುದರಿಂದ ನಮಗೆ ಬೆದರಿಕೆ ಕರೆಗಳು ಬರಬಹುದೆಂಬ ಆತಂಕ ಕೂಡ ಇದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರ ನೀಡಲಾಗುವುದು''
-ಆಲಿಯಾ ಅಸ್ಸಾದಿ, ವಿದ್ಯಾರ್ಥಿನಿ