ಹೈಕೋರ್ಟ್ ಆದೇಶ ಸಮಾಧಾನಕರವಾಗಿಲ್ಲ: ಅಥಾವುಲ್ಲ ಪುಂಜಾಲಕಟ್ಟೆ
ಅಥಾವುಲ್ಲ ಪುಂಜಾಲಕಟ್ಟೆ
ಉಡುಪಿ, ಫೆ.10: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಸಮಾಧಾನಕರವಾಗಿಲ್ಲ. ಸೋಮವಾರ ಮತ್ತೆ ವಿಚಾರಣೆ ಮುಂದು ವರೆಯಲಿರುವುದುರಿಂದ ನಾವು ಆದೇಶ ಬರುವವರೆಗೆ ಕಾದು ನೋಡುತ್ತೇವೆ. ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ಭರವಸೆ ಇದೆ. ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ಆಶಯ ಕೂಡ ಇದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ನಮ್ಮ ವಿರುದ್ಧವಾಗಿ ತೀರ್ಪು ಬಂದರೆ ನಾವು ಕಾನೂನಾತ್ಮಕ ಹೋರಾಟವನ್ನು ಮುಂದುವರೆಸಲಿದ್ದೇವೆ. ಹಿಜಾಬ್ ಮತ್ತು ಕೇಸರಿ ಶಾಲನ್ನು ಒಂದೇ ಮಾರ್ಗದಲ್ಲಿ ಇಟ್ಟುಕೊಂಡು ಈ ರೀತಿಯ ಆದೇಶ ಹೊರಡಿಸಿರುವುದು ನಮಗೆ ಸಮಾಧಾನ ತಂದಿಲ್ಲ ಎಂದರು.
ಹಿಜಾಬ್ಗೆ ಕೇಸರಿ ಶಾಲು ಹೋಲಿಕೆ ಮಾಡಲು ಇಲ್ಲಿ ಆಗುವುದಿಲ್ಲ. ಹೈಕೋರ್ಟ್ ಆದೇಶ ಬರುವ ಸಂದರ್ಭದಲ್ಲಿ ಕೇಸರಿ ಶಾಲು ವಿವಾದವನ್ನು ಎಬ್ಬಿಸಲಾಗಿದೆ. ಈ ಮೂಲಕ ಹೈಕೋರ್ಟ್ನ ದಾರಿ ತಪ್ಪಿಸುವ ಪ್ರಯತ್ನವನ್ನು ಎಬಿವಿಪಿ ಹಾಗೂ ಸಂಘಪರಿವಾರ ಮಾಡುತ್ತಿದೆಂದು ಅವರು ಆರೋಪಿಸಿದರು.
ತರಗತಿಗೆ ಹಾಜರಾಗುವ ವಿಚಾರ ಆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರಿಗೆ ಬಿಟ್ಟದ್ದು. ಅದು ಅವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಅವರ ಧಾರ್ಮಿಕ ಹಾಗೂ ನಂಬಿಕೆ ವಿಚಾರ ಕೂಡ ಬರುತ್ತದೆ. ರಘುಪತಿ ಭಟ್ ಕೇಸರಿ ಶಾಲು ವಿಚಾರ ಇಟ್ಟುಕೊಂಡು ಹಿಜಾಬ್ ನಿಷೇಧಿಸಲು ಹೋಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿರುವ ಸಂಬಂಧ ಕಾಲೇಜು ಆರಂಭವಾದರೂ ನಮ್ಮ ಮಕ್ಕಳನ್ನು ನಾವು ಕಾಲೇಜಿಗೆ ಕಳುಹಿಸುವುದಿಲ್ಲ. ಇದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಆದುದರಿಂದ ಹೈಕೋರ್ಟ್ನಿಂದ ತೀರ್ಪು ಬರುವವರೆಗೆ ನಾವು ಕಾಯುತ್ತೇವೆ’
-ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ಪೋಷಕರು