ಮಂಗಳೂರು: ಬ್ಯಾಂಕ್ ಖಾತೆದಾರರಿಗೆ ಆನ್‌ಲೈನ್ ವಂಚನೆ

ಮಂಗಳೂರು, ಫೆ.10: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಒಟ್ಟು 2.43 ಲ.ರೂ. ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯೋರ್ವರು ಆ ಬ್ಯಾಂಕ್‌ನ 2 ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ ಒಂದು ಕಾರ್ಡ್‌ನ್ನು ಬ್ಲಾಕ್ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕಸ್ಟಮರ್ ಕೇರ್ ನಂಬರ್‌ನ್ನು ಹುಡುಕಿ ಕರೆ ಮಾಡಿದರು. ಕರೆ ಸ್ವೀಕರಿಸಿದ ವ್ಯಕ್ತಿಯು ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಲು ತಿಳಿಸಿದ. ಅದರಂತೆ ವ್ಯಕ್ತಿಯು ಡೌನ್‌ಲೋಡ್ ಮಾಡಿದರು. ಬಳಿಕ ಕರೆ ಮಾಡಿದ ವ್ಯಕ್ತಿ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಂಬರ್, ಪಿನ್ ನಂಬರ್ ಹಾಕಲು ತಿಳಿಸಿದ. ಕಾರ್ಡ್‌ದಾರರು ಆ ವಿವರಗಳನ್ನು ಹಾಕಿದರು. ಅನಂತರ ಅವರ ಡೆಬಿಟ್ ಕಾರ್ಡ್‌ನಿಂದ 5 ಬಾರಿ 5,025 ರೂ.ಗಳಂತೆ 25,125 ರೂ, ಕ್ರೆಡಿಟ್ ಕಾರ್ಡ್‌ನಿಂದ ಹಲವು ಹಂತಗಳಲ್ಲಿ 1,67,530 ರೂ. ಕಡಿತಗೊಂಡ ಬಗ್ಗೆ ಫೆ.9ರಂದು ಮೊಬೈಲ್‌ಗೆ ಮೆಸೇಜ್ ಬಂತು. 1,92,655 ರೂ.ಗಳನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವ ಬಗ್ಗೆ ದೂರು ನೀಡಲಾಗಿದೆ.
ಬ್ಯಾಂಕ್ ಉದ್ಯೋಗಿಯೆಂದು ಹೇಳಿ ವಂಚನೆ
ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ 51,150 ರೂ.ಗಳನ್ನು ವರ್ಗಾಯಿಸಿ ವಂಚಿಸಲಾಗಿದೆ. ವ್ಯಕ್ತಿಯೋರ್ವರು ಅವರ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಮಂಗಳೂರಿನ ಕೆನರಾ ಬ್ಯಾಂಕ್ ಗಾಂಧಿನಗರ ಶಾಖೆಯಲ್ಲಿ ಜಂಟಿ ಉಳಿತಾಯ ಖಾತೆ ಹೊಂದಿದ್ದು ಅವರಿಗೆ ಡೆಬಿಟ್ ಕಾರ್ಡ್ ಮಂಜೂರಾಗಿತ್ತು.
2021ರ ಸೆ.15ರಂದು ಸಂಜೆ 8509055504 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೋರ್ವ ತನ್ನನ್ನು ಬ್ಯಾಂಕ್ ಉದ್ಯೋಗಿ ಯೆಂದು ಪರಿಚಯಿಸಿಕೊಂಡು ಕೆನರಾ ಬ್ಯಾಂಕ್ ಖಾತೆಗೆ ಹೊಂದಿಕೊಂಡಿರುವ ಡೆಬಿಟ್ ಕಾರ್ಡ್ ನಿಷ್ಕ್ರಿಯಗೊಂಡಿದೆ. ಅದನ್ನು ನವೀಕರಿಸಲು ಡೆಬಿಟ್ ಕಾರ್ಡ್ ನಂಬರ್ ಮತ್ತು ಸಿವಿವಿ ಕೋಡ್ ನೀಡಬೇಕು ಎಂದು ಹೇಳಿದ್ದ. ಅದರಂತೆ ದೂರುದಾರರು ಎಟಿಎಂ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಕೋಡ್ ನೀಡಿದ್ದಾರೆ. ಆ ಕೂಡಲೇ ಅವರ ಖಾತೆಯಿಂದ ಎರಡು ಹಂತಗಳಲ್ಲಿ 51,150 ರೂ. ವರ್ಗಾಯಿಸಿ ಮೋಸ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.







