ಉಳ್ಳಾಲ ಉರೂಸ್‍ಗೆ ಚಾಲನೆ

ಉಳ್ಳಾಲ: ಔಲಿಯಾಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಪ್ರದೇಶದಲ್ಲಿ ಬರ್ಕತ್ ಇದೆ. ಅವರಿಗೆ ಗೌರವ ಕೂಡಾ ಇದೆ. ಅವರನ್ನು ನಾವು ಗೌರವ ದಿಂದ ಕಾಣಬೇಕು ಅದು ನಮ್ಮ ಕರ್ತವ್ಯ ಕೂಡಾ ಹೌದು ಎಂದು ಜಮಲುಲ್ಲೈಲಿ ತಂಙಳ್ ಕ್ಯಾಲಿಕಟ್ ಹೇಳಿದರು.
ಅವರು ಉಳ್ಳಾಲದಲ್ಲಿ ಫೆ. 10 ರಿಂದ ಆರಂಭಗೊಂಡ ಸೆಯ್ಯದ್ ಮದನಿ ತಂಙಳ್ ರವರ 429 ನೇ ವಾರ್ಷಿಕ ಹಾಗೂ 21 ಪಂಚ ವಾರ್ಷಿಕ ಉರೂಸ್ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯದ ಗೌರವ , ಐಕ್ಯತೆ ಉಳಿಸಿ ಕೊಳ್ಳಲು,ಆಶಯ ಆದರ್ಶ ಗಳನ್ನು ಉಳಿಸಿ ಕೊಂಡು ಬರಲು ಸಾಧ್ಯ ವಾಗಲು ಮದನಿ ತಂಙಳ್ ರವರ ಕರಾಮತ್ತು ಕೂಡಾ ಕಾರಣ ಎಂದರು.
ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮ ಅತಿಥಿ ಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕುಗ್ರಾಮ ವಾದ ಉಳ್ಳಾಲ ಎತ್ತರಕ್ಕೆ ಬೆಳೆಯಲು ಸೆಯ್ಯದ್ ಮದನಿ ಕಾರಣ ರಾಗಿದ್ದಾರೆ. ಇಲ್ಲಿ ಶಿಕ್ಷಣ ಸಂಸ್ಥೆ ,ಮದ್ರಸ ಕಾರ್ಯಾಚರಿಸುತ್ತಿದೆ. ಇದಕ್ಕೆ ಕಾರಣ ಉಳ್ಳಾಲ ದರ್ಗಾ ಕೆ ಹರಿದು ಬರುವ ನೇರ್ಚೆ ಹಣ ಆಗಿದೆ. ಇದರಿಂದ ಉಳ್ಳಾಲ ಅಭಿವೃದ್ಧಿ ಯತ್ತ ಸಾಗುತ್ತಿದೆ ಎಂದರು.
ಶಾಸಕ ಯು,ಟಿ. ಖಾದರ್ ಮಾತನಾಡಿ, ಸಾಮರಸ್ಯ ಕೇಂದ್ರವಾದ ಉಳ್ಳಾಲ ದರ್ಗಾದ ಜನಪರ ಸೇವೆ ಶ್ಲಾಘನಾರ್ಹ. ಭಾರತೀಯ ಮುಸ್ಲಿಮರಾದ ನಾವು ಭಾರತದ ಸಾರ್ವಭೌಮತ್ವಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತಾ ಬಂದವರು ಎಂದರು.
ಸೈಯದ್ ಮದನಿ ಅರೆಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ ತೋಡಾರು ಸಾಂದರ್ಭಿಕವಾಗಿ ಮಾತನಾಡಿ, ಸಯ್ಯದ್ ಮದನಿ ತಂಙಳ್‍ರ ಆದರ್ಶ ಜೀವನ ನಮಗೆ ಮಾದರಿ ಎಂದು ಹೇಳಿದರು. ಸಂಯುಕ್ತ ಖಾಝಿ ಫಝಲ್ ಕೋಯಮ್ಮ ತಂಙಳ್ ದುಆ ನೆರವೇರಿಸಿದರು.
ಅನ್ವರ್ ಅಲಿ ದಾರಿಮಿ, ಅಹ್ಮದ್ ಪೂಕೋಯ ತಂಙಳ್ , ಇಂಬಿಚ್ಚಿಕೋಯ ತಂಙಳ್, ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು, ಪ್ರಧಾನ ಕಾರ್ಯದರ್ಶಿ ತ್ವಾಹ ಹಾಜಿ, ಕಾರ್ಯದರ್ಶಿ ನೌಶಾದ್ ಅಲಿ, ಅಝಾದ್ ಇಸ್ಮಾಯಿಲ್, ಕೋಶಾಧಿಕಾರಿ. ಯು.ಕೆ. ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್ , ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ , ಪ್ರಚಾರ ಸಮಿತಿ ಸಂಚಾಲಕರಾದ ಆಸೀಫ್ ಅಬ್ದುಲ್ಲ ಮತ್ತು ಎ.ಕೆ. ಮೊಯ್ದಿನ್ ಹಾಜಿ, ಹಮೀದ್ ಕೋಡಿ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು ಉಪಸ್ಥಿತರಿದ್ದರು.







