ಫೆ. 13- 20 ಮಾಡನ್ನೂರು ಮಖಾಂ ಉರೂಸ್ ಸಮಾರಂಭ

ಪುತ್ತೂರು: ತಾಲೂಕಿನ ಕಾವು ಮಾಡನ್ನೂರು ಮಖಾಂ ಶರೀಫಿನ ಉರೂಸ್ ಸಮಾರಂಭವು ಫೆ. 13 ರಿಂದ 20ರ ತನಕ ಮಾಡನ್ನೂರು ಶಹೀದಿಯಾ ನಗರದಲ್ಲಿ ನಡೆಯಲಿದೆ ಎಂದು ಮಾಡನ್ನೂರು .ಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ಮಾತನಾಡಿ ಮಾಡನ್ನೂರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವು ಮಖಾಂ ಝಿಯಾರತ್, ಧಾರ್ಮಿಕ ಮತ ಪ್ರವಚನ, ನೂರೇ ಅಜ್ಮೀರ್, ಖತ್ಮುಲ್ ಕುರ್ಆನ್ ದುಆಃ ಮಜ್ಲಿಸ್,ಮೌಲಿದ್ ಪಾರಾಯಣ,ಆಂಬ್ಯುಲೆನ್ಸ್ ಲೋಕಾರ್ಪಣೆ, ಅನ್ನದಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.13ರಂದು ಬೆಳಗ್ಗೆ ಗಂಟೆ 10ಕ್ಕೆ ಜಮಾಅತ್ ಅಧ್ಯಕ್ಷ ಕೆ.ಕೆ. ಇಬ್ರಾಹೀಂ ಹಾಜಿ ಧ್ವಜಾರೋಹಣ ನಡೆಸಲಿದ್ದು, ಸ್ಥಳೀಯ ಖತೀಬ್ ಸಿರಾಜುದ್ದೀನ್ ಫೈಝಿ ದರ್ಗಾ ಝಿಯಾರತ್ ನೇತೃತ್ವ ವಹಿಸಲಿದ್ದಾರೆ. 8 ದಿನಗಳ ಕಾಲ ನಡೆಯುಲಿರುವ ಧಾರ್ಮಿಕ ಮತಪ್ರವಚನದ ಉದ್ಘಾಟನೆಯು ಅಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ನಡೆಯಲಿದ್ದು, ಪುತ್ತೂರು ಕೇಂದ್ರ ಮಸೀದಿ ಮುದರ್ರಿಸ್ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಲ್ ಉದ್ಘಾಟಿಸಲಿದ್ದಾರೆ, ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಲಿದ್ದಾರೆ, ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಪ್ರಾಸ್ತಾವಿಕ ಬಾಷಣ ಮಾಡಲಿದ್ದಾರೆ. ಅಶ್ರಫ್ ರಹ್ಮಾನಿ ಕಾಸರಗೋಡು ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಫೆ.16 ರಂದು “ನೂರೇ ಅಜ್ಮೀರ್” ಬೃಹತ್ ಆಧ್ಯಾತ್ಮಿಕ ಸಂಗಮವು ನಡೆಯಲಿದ್ದು, ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಮುನ್ನಡೆಸಲಿದ್ದಾರೆ. ಸಯ್ಯದ್. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುಆಃ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಅಂಬುಲೆನ್ಸ್ ಲೋಕಾರ್ಪಣೆ ನಡೆಯಲಿದೆ.
ಫೆ. 19 ರಂದು ಸಂಜೆ “ಖತ್ಮುಲ್ ಕುರ್ ಆನ್ ದುಆಃ ಮಜ್ಲಿಸ್” ನಡೆಯಲಿದ್ದು, ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ರಾಮಂದಳಿ ನೇತೃತ್ವ ನೀಡಲಿದ್ದಾರೆ.
ಫೆ. 20 ರಂದು ಮಗ್ರಿಬ್ ನಮಾಝಿನ ಬಳಿಕ ಉರೂಸು ಸಮಾರಂಭದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ‘ಸಮಸ್ತ’ ಉಲಮಾ ಒಕ್ಕೂಟದ ಅಧ್ಯಕ್ಷರೂ ಮಾಡನ್ನೂರು ಮೊಹಲ್ಲಾ ಖಾಝಿಗಳೂ ಆದ ಅಸ್ಸಯ್ಯಿದ್ ಜಿಪ್ರಿ ಮುತ್ತುಕೋಯ ತಂಙಳ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಲಿ ತಂಙಳ್ ಕುಂಬೋಳ್ ದುಆಃ ನಡೆಸಲಿದ್ದು ಜಮಾಅತ್ ಅಧ್ಯಕ್ಷ ಕೆ.ಕೆ ಇಬ್ರಾಹೀಂ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಡನ್ನೂರು ಮಸೀದಿ ಕಮಿಟಿ ಅಧ್ಯಕ್ಷ ಕೆ.ಕೆ ಇಬ್ರಾಹೀಂ ಹಾಜಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಮಸೀದಿ ಕಮಿಟಿ ಉಪಾಧ್ಯಕ್ಷ, ಸಿ.ಹೆಚ್ ಅಬ್ದುಲ್ ಅಝೀಝ್, ಪ್ರಧಾನ ಕಾರ್ಯದರ್ಶಿ ಎನ್. ಅಬ್ದುಲ್ ಖಾದರ್ ಮುಸ್ಲಿಯಾರ್ ಉಪಸ್ಥಿತರಿದ್ದರು.







