ಎಂಜಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು,ಪೇಟ ಒದಗಿಸಿದ್ದ ಬಜರಂಗದಳ,ಹಿಂಜಾವೇ: ಹಿಂದುಸ್ತಾನ್ ಟೈಮ್ಸ್ ವರದಿ

Photo: thenewsminute.com
ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಎರಡು ದಿನಗಳ ಹಿಂದೆ ಹಿಜಾಬ್ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಧರಿಸಿದ್ದ ಕೇಸರಿ ಶಾಲು ಮತ್ತು ಪೇಟಾಗಳನ್ನು ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆಯ ಸದಸ್ಯರು ಒದಗಿಸಿದ್ದರು ಎಂದು ಪ್ರತಿಭಟನೆಯ ಭಾಗವಾಗಿದ್ದ ಹಾಗೂ ಹೆಸರು ಹೇಳಲಿಚ್ಛಿಸದ ಮೂವರು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದು hindustantimes ವರದಿ ಮಾಡಿದೆ.
ಈ ಕೇಸರಿ ಶಾಲು ಪ್ರತಿಭಟನೆ ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು ಹಾಗೂ ವಾಟ್ಸ್ಯಾಪ್ ಮೂಲಕವೂ ಸಂದೇಶಗಳನ್ನು ಹರಡಲಾಗಿತ್ತು ಎಂದು ಮೂಲಗಳು ತಿಳಿಸಿವೆ ಎಂದು hindustantimes ವರದಿ ಮಾಡಿದೆ.
"ನಮ್ಮ ಕಾಲೇಜಿನಲ್ಲಿಯೂ ಈ ಹಿಜಾಬ್ ವಿಚಾರವನ್ನು ಈ ಶೈಕ್ಷಣಿಕ ವರ್ಷದೊಳಗೆ ಅಂತ್ಯಗೊಳಿಸಬೇಕಿದೆ ಹಾಗೂ ಏಕರೂಪದ ವಸ್ತ್ರಸಂಹಿತೆ ಇರುವಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಸೋಮವಾರ ಕಡ್ಡಾಯವಾಗಿ ಕೇಸರಿ ಶಾಲುಗಳನ್ನು ತಂದು ತಮ್ಮ ಬ್ಯಾಗ್ಗಳಲ್ಲಿ ಸಂಘಟಕರ ಸೂಚನೆಗಳ ತನಕ ಇರಿಸಿಕೊಳ್ಳಬೇಕು ಸೂಚನೆ ದೊರಕಿದ ನಂತರ ಅದನ್ನು ಭುಜದಲ್ಲಿ ಧರಿಸಿ ಕಾಲೇಜು ಪ್ರವೇಶಿಸಬೇಕು,'' ಎಂದು ವಿದ್ಯಾರ್ಥಿಯೊಬ್ಬನಿಗೆ ಕಳುಹಿಸಲಾಗಿದ್ದ ವಾಟ್ಸ್ಯಾಪ್ ಸಂದೇಶದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಕಾಲೇಜಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಕಳುಹಿಸಿದ್ದ ವಾಟ್ಸ್ಯಾಪ್ ಸಂದೇಶವನ್ನು ನೋಡಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಪ್ರಕಾರ ವಾಟ್ಸ್ಯಾಪ್ ಸಂದೇಶವನ್ನು ಎಲ್ಲಾ ವಿದ್ಯಾರ್ಥಿ ಗುಂಪುಗಳಿಗೂ ನೀಡಲಾಗಿತ್ತು. ಈ ಪ್ರತಿಭಟನೆಗಳ ಹಿಂದೆ ಯಾರಿದ್ದಾರೆ ಎಂದೂ ಕೆಲ ಶಿಕ್ಷಕರು ಕೇಳಿದ್ದಾರೆಂದು ಆ ವ್ಯಕ್ತಿ ಹೇಳಿದ್ದಾರೆ. ಇಂತಹ ಒಂದು ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂಬುದೂ ಕಾಲೇಜಿನ ಆಡಳಿತಕ್ಕೆ ತಿಳಿದಿತ್ತು ಎಂದು ಆ ವ್ಯಕ್ತಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆ ನಂತರ ವಿದ್ಯಾರ್ಥಿಗಳು ಶಾಲುಗಳನ್ನು ತಮ್ಮ ಬಳಿಯೇ ಇರಿಸಿಕೊಂಡರೂ ಪೇಟಾಗಳನ್ನು ವಾಪಸ್ ನೀಡಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ ಈ ಕೇಸರಿ ಶಾಲು ಪ್ರತಿಭಟನೆ ಸಂಘಟಿತವಾಗಿ ನಡೆದಿತ್ತು ಎಂಬ ಆರೋಪವನ್ನು ಹಿಂದು ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್ ನಿರಾಕರಿಸಿದ್ದಾರೆ. "ಇಲ್ಲಿಯ ತನಕದ ಪ್ರತಿಭಟನೆಗಳನ್ನು ವಿದ್ಯಾರ್ಥಿಗಳೇ ಆಯೋಜಿಸಿದ್ದರು ಹಾಗೂ ನಾವು ಇದರಲ್ಲಿ ಶಾಮೀಲಾಗಿಲ್ಲ. ಕಾಲೇಜಿನೊಳಗೆ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳು ಏನು ನಿರ್ಧರಿಸುತ್ತಾರೆ ಎಂದೂ ನಮಗೆ ತಿಳಿದಿಲ್ಲ. ಹಾಗೂ ಶಾಲು ಮತ್ತಿತರ ವಸ್ತುಗಳನ್ನು ನಾವು ಹೇಗೆ ಸರಬರಾಜು ಮಾಡಲು ಸಾಧ್ಯವೆಂದೂ ನಮಗೆ ತಿಳಿದಿಲ್ಲ. ಸುಮಾರು ರೂ. 70 ಬೆಲೆಬಾಳುವ ಶಾಲುಗಳನ್ನು ನಾವು ಪೂರೈಸಬೇಕೆಂದೇನೂ ಇಲ್ಲ. ವಿದ್ಯಾರ್ಥಿಗಳು ತಾವಾಗಿಯೇ ಮಾಡಿದ್ದಾರೆ ಹಾಗೂ ವಿದ್ಯಾರ್ಥಿಗಳು ಏನು ಮಾಡಬಹುದೆಂಬುದಕ್ಕೆ ಇದೊಂದು ಉದಾಹರಣೆ,'' ಎಂದು ಅವರು ಹೇಳಿದ್ದಾರೆ.
ಹಿಜಾಬ್ ವಿವಾದ ಆರಂಭಗೊಂಡಂದಿನಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಹೆಸರು ಕೂಡ ಹಲವು ಬಾರಿ ಕೇಳಿ ಬಂದಿತ್ತು. "ಸಂಘ(ಬಲಪಂಥೀಯ ಸಂಘಟನೆಗಳು), ಅಭಾವಿಪ ಮತ್ತಿತರರು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ,'' ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಹೇಳುತ್ತಾರೆ.
ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದೇ ಸಿಎಫ್ಐ ಎಂದು ಹಿಂಜಾವೇ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್ ಆರೋಪಿಸಿದ್ದಾರೆ.







