ಮುಸ್ಲಿಂ ಮಹಿಳೆಯರ ಮೇಲೆ ವರ್ಣಬೇಧ ನೀತಿ ಹೇರಲು ಹಿಜಾಬ್ ನೆಪ: ಪ್ರಜಾಸತ್ತಾತ್ಮಕ ಗುಂಪು ಬಹಿರಂಗ ಪತ್ರದಲ್ಲಿ ಪ್ರತಿಪಾದನೆ

ಹೊಸದಿಲ್ಲಿ, ಫೆ. 10: ಮುಸ್ಲಿಂ ಮಹಿಳೆಯರ ಮೇಲೆ ವರ್ಣಬೇಧ ನೀತಿ ಹೇರಲು ಹಾಗೂ ಅವರ ಮೇಲೆ ದಾಳಿ ನಡೆಸುವ ನೆಪಕ್ಕಾಗಿ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಪ್ರಜಾಸತ್ತಾತ್ಮಕ ಗುಂಪು, ಶಿಕ್ಷಣ ತಜ್ಞರು, ವಕೀಲರು ಹಾಗೂ ಇತರ ವೃತ್ತಿಪರರು ಗುರುವಾರ ಬಿಡುಗಡೆ ಮಾಡಿದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಈ ಬಹಿರಂಗ ಪತ್ರಕ್ಕೆ ಸಹಿ ಹಾಕಿದವರಲ್ಲಿ ಹೋರಾಟಗಾರರಾದ ಸಫೂರಾ ಝರ್ಗಾರ್, ಕವಿತಾ ಕೃಷ್ಣನ್, ರಾಧಿಕಾ ವೇಮುಲಾ ಹಾಗೂ ಇತರರು ಸೇರಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಧರಿಸುವುದರ ಅರ್ಥ ವಿಭಿನ್ನ ಹಾಗೂ ಅಸಮಾನ ಆರ್ಥಿಕ ವರ್ಗಗಳ ವಿದ್ಯಾರ್ಥಿಗಳ ನಡುವಿನ ಭಿನ್ನತೆಯನ್ನು ನಿವಾರಿಸಲು. ಹೊರತು ಬಹುರೂಪಿ ದೇಶದ ಮೇಲೆ ಏಕರೂಪಿ ಸಂಸ್ಕೃತಿಯನ್ನು ಹೇರಲು ಅಲ್ಲ ಎಂದು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ‘‘ಆದುದರಿಂದಲೇ ತರಗತಿಗಳಲ್ಲಿ ಮಾತ್ರವಲ್ಲದೆ, ಪೊಲೀಸ್ ಹಾಗೂ ಸೇನೆಗಳಲ್ಲಿ ಸಿಕ್ಖರಿಗೆ ಟರ್ಬನ್ ಧರಿಸಲು ಅನುಮತಿ ನೀಡಿರುವುದು’’ ಎಂದು ಪತ್ರ ಹೇಳಿದೆ. ‘‘ಆದುರಿಂದಲೇ ಹಿಂದೂ ವಿದ್ಯಾರ್ಥಿನಿಯರು ಶಾಲೆ ಹಾಗೂ ಕಾಲೇಜು ಸಮವಸ್ತ್ರದೊಂದಿಗೆ ಬಿಂದಿ, ಬೊಟ್ಟು, ತಿಲಕ, ವಿಭೂತಿ ಇರಿಸಿಕೊಂಡು ಯಾವುದೇ ಟೀಕೆ ಅಥವಾ ವಿವಾದ ಇಲ್ಲದೆ ಬರಲು ಸಾಧ್ಯವಾಗಿರುವುದು’ ಎಂದು ಪತ್ರ ತಿಳಿಸಿದೆ.
ಕರಾವಳಿ ಕರ್ನಾಟಕದ ಹಿಂದೂ ಅತಿಮಾನುಷವಾದಿಗಳ ಗುಂಪು 2008ರಿಂದ ಜೊತೆಯಾಗಿ ಇರುವ ಹಿಂದೂ ಹಾಗೂ ಮುಸ್ಲಿಂ ಸಹಪಾಠಿಗಳು, ಗೆಳೆಯರು ಹಾಗೂ ಪ್ರೇಮಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಪತ್ರ ಹೇಳಿದೆ. ಪಬ್‌ಗೆ ಭೇಟಿ ನೀಡಿದ, ವಿದೇಶಿ ಉಡುಪು ಧರಿಸಿದ ಅಥವಾ ಮುಸ್ಲಿಂ ವ್ಯಕ್ತಿಯನ್ನು ಪ್ರೇಮಿಸುತ್ತಿರುವ/ವಿವಾಹವಾಗಿರುವ ಹಿಂದೂ ಮಹಿಳೆಯ ಮೇಲೆ ನಡೆದ ಹಿಂಸಾತ್ಮಕವಾಗಿ ದಾಳಿ ನಡೆಸಿದ ಘಟನೆಗಳಿಗೆ ಇದು ಸಮಾನವಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.







