ಲಿಬಿಯಾ: ಪ್ರಧಾನಿಯ ಕಾರಿನ ಮೇಲೆ ಗುಂಡಿನ ದಾಳಿ

SOURCE: WIKIPEDIA
ಟ್ರಿಪೋಲಿ, ಫೆ.10: ಲಿಬಿಯಾದ ಮಧ್ಯಂತರ ಪ್ರಧಾನಿ ಅಬ್ದುಲ್ ಹಮೀದ್ ಡಿಬೆಬಾ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಬೆಂಗಾವಲ ವಾಹನ ಪಡೆಯ ಮೇಲೆ ರಾಜಧಾನಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಇದೊಂದು ಹತ್ಯಾ ಯತ್ನವಾಗಿದೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ. ಬೆಬಾ ಮನೆಗೆ ಮರಳುತ್ತಿದ್ದ ಸಂದರ್ಭ ದಾಳಿ ನಡೆದಿದ್ದು ಪ್ರಧಾನಿಯ ಕಾರಿನ ಗಾಜನ್ನು ಭೇದಿಸಿ ಗುಂಡು ಒಳನುಗ್ಗಿದೆ. ಆದರೆ ಅವರು ಹಾಗೂ ಚಾಲಕ ಅಪಾಯವಿಲ್ಲದೆ ಪಾರಾಗಿದ್ದಾರೆ. ಕಲಾಶ್ನಿಕೋವ್ ಗನ್ನಿಂದ ದಾಳಿ ನಡೆಸಿರುವ ಸಾಧ್ಯತೆಯಿದ್ದು ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಮಧ್ಯಂತರ ಸರಕಾರದ ನೇತೃತ್ವ ವಹಿಸುವ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಲಿಬಿಯಾದ ಸಂಸತ್ತಿನ ಅಧಿವೇಶನ ಗುರುವಾರ ನಡೆಯುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಹಾಲಿ ಮಧ್ಯಂತರ ಪ್ರಧಾನಿ ಅಬ್ದುಲ್ ಹಮೀದ್ ಡಿಬೆಬಾರನ್ನು ಬದಲಿಸುವ ನಿಟ್ಟಿನಲ್ಲಿ ಈ ಅಧಿವೇಶನ ನಡೆಯಲಿದೆ. ಆದರೆ ಪದತ್ಯಾಗ ಮಾಡಲು ಅಬ್ದುಲ್ ಹಮೀದ್ ನಿರಾಕರಿಸಿದ್ದಾರೆ. ಪ್ರಭಾವೀ ಉದ್ಯಮಿಯಾಗಿರುವ ಡಿಬೆಬಾರನ್ನು ವಿಶ್ವಸಂಸ್ಥೆ ಬೆಂಬಲಿತ ನ್ಯಾಷನಲ್ ಯುನಿಟಿ ಸರಕಾರದ ಪ್ರಧಾನಿಯನ್ನಾಗಿ ನೇಮಿಸಲಾಗಿತ್ತು. ಡಿಸೆಂಬರ್ 24ರಂದು ದೇಶದಲ್ಲಿ ಚುನಾವಣೆ ನಡೆಸಬೇಕು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಷರತ್ತಿನೊಂದಿಗೆ ಪ್ರಧಾನಿಯಾಗಿ ನೇಮಕಗೊಂಡಿದ್ದ ಡಿಬೆಬಾ, ತಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನವೆಂಬರ್ನಲ್ಲಿ ಘೋಷಿಸಿದ್ದರು. ಈ ವಿವಾದದಿಂದ ಅಂತಿಮವಾಗಿ ಚುನಾವಣೆ ರದ್ದುಗೊಂಡಿತ್ತು. ಇದೀಗ ಡಿಬೆಬಾರನ್ನು ಪದಚ್ಯುತಗೊಳಿಸಿ ನೂತನ ಮಧ್ಯಂತರ ಪ್ರಧಾನಿಯ ಆಯ್ಕೆಗೆ ನಿರ್ಧರಿಸಲಾಗಿದೆ. ಆದರೆ ಯಾವುದೇ ಮಧ್ಯಂತರ ಸರಕಾರವನ್ನು ತಾನು ಮಾನ್ಯ ಮಾಡುವುದಿಲ್ಲ. ಚುನಾವಣೆಯಲ್ಲಿ ಆಯ್ಕೆಗೊಂಡ ಸರಕಾರಕ್ಕೆ ಮಾತ್ರ ಅಧಿಕಾರ ಹಸ್ತಾಂತರಿಸುವುದಾಗಿ ಡಿಬೆಬಾ ಘೋಷಿಸಿದ್ದಾರೆ.
ಆದರೆ ವಿಶ್ವಸಂಸ್ಥೆ ಹಾಗೂ ಕೆಲವು ಪಾಶ್ಚಿಮಾತ್ಯ ದೇಶಗಳು ಚುನಾವಣೆ ಮುಗಿಯುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಡಿಬೆಬಾರನ್ನು ಬೆಂಬಲಿಸಿವೆ. ಈ ಬೆಳವಣಿಗೆ 2014ರಲ್ಲಿ ಸಂಭವಿಸಿದ 2 ಸಮಾನಾಂತರ ಸರಕಾರ ರಚನೆಯ ಸನ್ನಿವೇಶ ಸೃಷ್ಟಿಸುವ ಸಾಧ್ಯತೆಯಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಲಿಬಿಯಾದ ಸಂಸತ್ತು ಪೂರ್ವದ ಟೊಬ್ರಕ್ ನಗರದಲ್ಲಿದ್ದರೆ, ರಾಜಧಾನಿ ಟ್ರಿಪೋಲಿಯಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ.







