ಯುವತಿ ಆತ್ಮಹತ್ಯೆ
ಪಡುಬಿದ್ರಿ: ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಬುಧವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಪಡುಬಿದ್ರಿಯ ಬ್ರಹ್ಮಸ್ಥಾನ ಬಳಿ ನಡೆದಿದೆ.
ಇಲ್ಲಿನ ನಿವಾಸಿ ಸೌಜನ್ಯ (22) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈಕೆ ಹೈದರಾಬಾದ್‍ನ ವಿಪ್ರೊ ಕಂಪೆನಿಗಾಗಿ ದುಡಿಯುತ್ತಿದ್ದರು. ಕೊರೋನ ಕಾರಣಗಳಿಗಾಗಿ ಕಳೆದ 10 ತಿಂಗಳುಗಳಿಂದ ಈಕೆ ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು. ಇಂದು ತನ್ನ ತಂದೆ ತಾಯಿ ಇಬ್ಬರೂ ಸುರತ್ಕಲ್‍ಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಕೋಣೆಯಲ್ಲೇ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಾಹ್ನದ ವೇಳೆ ಹೆತ್ತವರು ಹಿಂತಿರುಗಿ ಬಂದಾಗಲೇ ಇದು ಬೆಳಕಿಗೆ ಬಂದಿದೆ. ಯುವತಿಯ ಅಜ್ಜಿಯೂ ಮನೆಯಲ್ಲೇ ಇದ್ದರೂ ಅವರ ಗಮನಕ್ಕಿದು ಬಂದಿರಲಿಲ್ಲ ಎಂದು ದೂರಲಾಗಿದೆ.
Next Story





