ಇಸ್ರೇಲ್ ದಾಳಿಯಲ್ಲಿ 3 ಪೆಲೆಸ್ತೀನೀಯರು ಮೃತ್ಯು
ಗಾಝಾಪಟ್ಟಿಯಲ್ಲಿ ಶೋಕ ಜಾಥಾ ನಡೆಸಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ
ಗಾಝಾ, ಫೆ.10: ಆಕ್ರಮಿತ ಪಶ್ಚಿಮದಂಡೆಯ ನಬ್ಲೂಸ್ ನಗರದಲ್ಲಿ ಇಸ್ರೇಲ್ ಪಡೆಗಳ ಗುಂಡಿನ ದಾಳಿಯಲ್ಲಿ ಮೂವರು ಪೆಲೆಸ್ತೀನೀಯರು ಮೃತಪಟ್ಟಿರುವುದನ್ನು ಖಂಡಿಸಿ ಗಾಝಾದಲ್ಲಿನ ಪೆಲೆಸ್ತೀನ್ ಸಂಘಟನೆ ಶೋಕ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿದೆ.
ಬುಧವಾರ ಕೇಂದ್ರ ಗಾಝಾ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು. ಈ ಹತ್ಯೆ ಅಪರಾಧವಾಗಿದೆ ಎಂದು ಖಂಡಿಸಿದ ಪ್ರತಿಭಟನಾಕಾರರು, ಪೆಲೆಸ್ತೀನಿಯನ್ ಅಥಾರಿಟಿ(ಪಿಎ) ಇಸ್ರೇಲ್ನೊಂದಿಗೆ ಭದ್ರತೆಯ ವಿಷಯದಲ್ಲಿ ಸಹಕರಿಸುವುದನ್ನು ಟೀಕಿಸಿದರು. ಇಸ್ರೇಲ್ನ ಹೇಡಿತನದ ಹತ್ಯೆಯ ಅಪರಾಧ ಮತ್ತು ವ್ಯಾಪಕ ಅತಿಕ್ರಮಣವನ್ನು ಖಂಡಿಸುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ವಿಫಲವಾಗಿದೆ. ಪಶ್ಚಿಮ ದಂಡೆಯಲ್ಲಿ ಪ್ರತೀ ದಿನ ಇಸ್ರೇಲ್ ಯೋಧರು ನಮ್ಮ ಜನರ ವಿರುದ್ಧ ದಾಳಿ ನಡೆಸಿ ಹತ್ಯೆ ಮಾಡುತ್ತಿದ್ದಾರೆ. ಮನೆಗಳನ್ನು ನೆಲಸಮಗೊಳಿಸುವುದು, ವಸಾಹತು ಚಟುವಟಿಕೆ ಯಾವುದೇ ತಡೆಯಿಲ್ಲದೆ ಮುಂದುವರಿದಿದ್ದು ಈ ಬಗ್ಗೆ ಅಂತರಾಷ್ಟ್ರೀಯ ಸಮುದಾಯದ ಮೌನ ಶಂಕಾಸ್ಪದವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆನಾಗರಿಕ ವಾಹನದಲ್ಲಿದ್ದ ಇಸ್ರೇಲ್ ಪಡೆ ಮಂಗಳವಾರ ನಬ್ಲೂಸ್ನ ಬಳಿಯ ಅಲ್-ಮಖ್ಫಿಯಾ ನಗರದಲ್ಲಿ ಕಾರೊಂದರ ಮೇಲೆ ಗುಂಡು ಹಾರಿಸಿದಾಗ 3 ಪೆಲೆಸ್ತೀನೀಯರು ಮೃತಪಟ್ಟಿದ್ದರು. ಈ ಹತ್ಯೆಯು ಇಸ್ರೇಲ್ನ ಅಪರಾಧ ದಾಖಲೆಗೆ ಮತ್ತೊಂದು ಸೇರ್ಪಡೆಯಾಗಿದೆ ಎಂದು ಗಾಝಾಪಟ್ಟಿಯಲ್ಲಿನ ಪೆಲೆಸ್ತೀನಿಯರ ಸಂಘಟನೆ ಹಮಾಸ್ನ ವಕ್ತಾರ ಇಸ್ಮಾಯಿಲ್ ರಾದ್ವಾನ್ ಹೇಳಿದ್ದಾರೆ.
ನಾವು ಸುಮ್ಮನೆ ಇರುವುದಿಲ್ಲ. ಅತಿಕ್ರಮಣವನ್ನು ಎಲ್ಲಾ ರೀತಿಯಿಂದಲೂ ಎದುರಿಸುವಂತೆ ಪಶ್ಚಿಮ ದಂಡೆಯಲ್ಲಿನ ನಮ್ಮ ಜನರಿಗೆ ಕರೆ ನೀಡುತ್ತಿದ್ದೇವೆ. ಗಾಝಾದಲ್ಲಿ ನಡೆದ ಮೆರವಣಿಗೆ ಪೆಲೆಸ್ತೀನಿಯರ ಒಗ್ಗಟ್ಟಿನ ಪ್ರತೀಕವಾಗಿದೆ. ಆದರೆ ಪಶ್ಚಿಮ ದಂಡೆಯ ಒಂದು ಭಾಗದಲ್ಲಿ ಆಡಳಿತ ನಿರ್ವಹಿಸುತ್ತಿರುವ ಪಿಎಯು ಭದ್ರತೆಯ ವಿಷಯದಲ್ಲಿ ಇಸ್ರೇಲ್ನೊಂದಿಗೆ ಸಹಕರಿಸುವ ಕಾರ್ಯನೀತಿ ಹೊಂದಿದ್ದು ಇದರ ಫಲ ಈ ಹತ್ಯೆಯಾಗಿದೆ ಎಂದು ರಾದ್ವಾನ್ ಟೀಕಿಸಿದ್ದಾರೆ. ಇಸ್ರೇಲ್ನ ಅತಿಕ್ರಮಣಕ್ಕೆ ನೆರವಾಗುವ ಕಾರ್ಯನೀತಿಯನ್ನು ಮರುಪರಿಶೀಲಿಸುವ ಸಮಯ ಒದಗಿ ಬಂದಿದೆ ಎಂದವರು ಹೇಳಿದ್ದಾರೆ.
ಇದೊಂದು ಅತ್ಯಂತ ಘೋರ ಹತ್ಯೆ ಎಂದು ಖಂಡಿಸಿರುವ ಪಿಎ, ಇದರ ಬಗ್ಗೆ ಅಂತರಾಷ್ಟ್ರೀಯ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ. ಈ ಮಧ್ಯೆ, ಪೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್(ಪಿಎಲ್ಒ)ದ ಎರಡನೇ ಉನ್ನತ ಸಂಸ್ಥೆ ಪೆಲೆಸ್ತೀನಿಯನ್ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಸೋಮವಾರ ಆರಂಭವಾದ 2 ದಿನದ ಸಭೆಯನ್ನು ಪೆಲೆಸ್ತೀನ್ನ ಹಲವು ಸಂಘಟನೆಗಳು ಬಹಿಷ್ಕರಿಸಿದ್ದವು.







