ಅಸ್ಸಾಂ ಮುನ್ನಾಬಾಯ್ ಎಂಬಿಬಿಎಸ್‌ನ ಅಸಲಿ ಕಥೆ ಕೇಳಿ...!

ಹೊಸದಿಲ್ಲಿ: ಅಸ್ಸಾಂನ ಪತಾಚರ್ ಕುಚಿ ನಿವಾಸಿ 24 ವರ್ಷ ವಯಸ್ಸಿನ ರಾಹುಲ್ ಕುಮಾರ್ ದಾಸ್ ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದ.
ಬಡ ಚಹಾ ಮಾರುವ ಮಹಿಳೆಯ ಮಗ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಪ್ರತಿಷ್ಠಿತ ಎಐಐಎಂಎಸ್‌ನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾನೆ ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಆದರೆ ಅಸ್ಸಾಂನ ಈ ಮುನ್ನಾಬಾಯ್ ಎಂಬಿಬಿಎಸ್ ಕಥೆ ಸುಳ್ಳು ಎನ್ನುವುದು ಇದೀಗ ಬಹಿರಂಗವಾಗಿದೆ.
ಅಧಿಕಾರಿಗಳು, ಪತ್ರಕರ್ತರಿಗೆ ನಕಲಿ ದಾಖಲೆ ನೀಡಿ ವಂಚಿಸಿದ ಅಂಶ ದೃಢಪಟ್ಟಿದೆ. ರಾಹುಲ್ ಹೇಳಿಕೆ ಸುಳ್ಳು ಎಂದು ನೀಟ್ ಪರೀಕ್ಷೆ ಬರೆದ ಕೆಲ ಅಸ್ಸಾಂ ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದು, ಈ ವಿದ್ಯಾರ್ಥಿಗಳ ಪ್ರತಿಪಾದನೆ ನಿಜ ಹಾಗೂ ರಾಹುಲ್ ಹೇಳಿಕೆ ಸುಳ್ಳು ಎನ್ನುವುದು ಸ್ಪಷ್ಟವಾಗಿದೆ.
ರಾಹುಲ್‌ನ ಪ್ರವೇಶಪತ್ರ ತಿರುಚಲ್ಪಟ್ಟಿರುವುದು ಹಾಗೂ ಹರ್ಯಾಣದ ವಿದ್ಯಾರ್ಥಿಯೊಬ್ಬನ ದಾಖಲೆಗಳನ್ನು ತಿರುಚಿ ತಾನು ಎಐಐಎಂಎಸ್ ಸೀಟು ಪಡೆದಿರುವುದಾಗಿ ನಂಬಿಸಿದ್ದಾನೆ. ರಾಹುಲ್‌ನ ನೀಟ್ ಪರೀಕ್ಷೆಯ ನೋಂದಣ ಸಂಖ್ಯೆ 2303001114 ಎಂದು ಮಾಧ್ಯಮಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಈ ನಂಬರ್ ವಾಸ್ತವವಾಗಿ ಹರ್ಯಾಣದ ಕಿರಣ್ ಜೀತ್ ಕೌರ್ ಎಂಬವರದ್ದಾಗಿದ್ದು, ಈ ವಿದ್ಯಾರ್ಥಿ ಅಖಿಲ ಭಾರತ ಮಟ್ಟದಲ್ಲಿ 11656ನೇ ರ‍್ಯಾಂಕ್ ಪಡೆದಿದ್ದರು.
ಅಸ್ಸಾಂನ ಪ್ರಾದೇಶಿಕ ಮಾಧ್ಯಮಗಳು ಮೊದಲು ರಾಹುಲ್ ಕಥೆಯನ್ನು ಬಿತ್ತರಿಸಿದ್ದವು. ಆ ಬಳಿಕ ರಾಷ್ಟ್ರಮಟ್ಟದ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಸಾಧನೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ಕೂಡಾ ರಾಹುಲ್ ಶಿಕ್ಷಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಘೋಷಿಸಿದ್ದರು. ಅಸ್ಸಾಂ ಸಚಿವ ರಂಜೀತ್ ಕುಮಾರ್ ದಾಸ್ ಅವರು ರಾಹುಲ್‌ನನ್ನು ಅಭಿನಂದಿಸಲು ಆತನ ಊರಿಗೆ ಆಗಮಿಸಿದ್ದರು.
ವಿದ್ಯಾರ್ಥಿ ಸಾಧನೆ ನಕಲಿ ಎನ್ನುವುದು ತಿಳಿಯುತ್ತಿದ್ದಂತೆ ಕೋಪಗೊಂಡ ಸ್ಥಳೀಯರು ರಾಹುಲ್ ತಾಯಿ ನಡೆಸುತ್ತಿದ್ದ ಚಹಾ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ರಾಹುಲ್, ಆತನ ತಾಯಿ ಹಾಗೂ ತಮ್ಮ ತಲೆ ಮರೆಸಿಕೊಂಡಿದ್ದಾರೆ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಏತನ್ಮಧ್ಯೆ ರಾಹುಲ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.







