ಯುನಿಟೆಕ್ ಮಾಜಿ ಪ್ರವರ್ತಕರಿಗೆ ಜಾಮೀನು ಕೋರಲು ಸುಪ್ರೀಂ ಅನುಮತಿ

ಹೊಸದಿಲ್ಲಿ, ಫೆ. 10: ಯುನಿಟೆಕ್ ಹಾಗೂ ರಮೇಶ್ ಚಂದ್ರ, ಅವರ ಪುತ್ರ ಸಂಜಯ್, ಅಜಯ್ ಸೇರಿದಂತೆ ಅದರ ಪ್ರವರ್ತಕರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗೆ ಮನವಿ ಮಾಡಲು ಯುನಿಟೆಕ್‌ನ ಮಾಜಿ ಪ್ರವರ್ತಕ ರಮೇಶ್ ಚಂದ್ರ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ಗೃಹ ಖರೀದಿಗಾರರ ಪಾವತಿಯನ್ನು ಬೇರೆ ವ್ಯವಹಾರಕ್ಕೆ ಬಳಸಿದ ಆರೋಪಕ್ಕೆ ಒಳಗಾಗಿರುವ ಹಾಗೂ 2017ರಿಂದ ಕಾರಾಗೃಹದಲ್ಲಿರುವ ಆರೋಪಿ ರಮೇಶ್ ಚಂದ್ರ ಅವರ ಪುತ್ರರಿಗೆ ಪ್ರತಿ ಮೂರು ವಾರಗಳಿಗೆ ಒಮ್ಮೆ ವರ್ಚುವಲ್ ವಿಚಾರಣೆಯಲ್ಲಿ ಹಾಜರಾಗಲು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಎಂ.ಆರ್. ಶಾಹ್ ಅವರನ್ನು ಒಳಗೊಂಡ ಇಬ್ಬರು ಸದಸ್ಯರ ಪೀಠ ಸೂಚಿಸಿದೆ. ಈ ನಡುವೆ ಜಾರಿ ನಿರ್ದೇಶನಾಲಯ, ಅಜಯ್ ಹಾಗೂ ಸಂಜಯ್ ಚಂದ್ರ ಅವರ ವಿರುದ್ಧದ ಆರೋಪ ಪಟ್ಟಿಯನ್ನು ಮುಂದಿನ ವಾರ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಆರೋಪ ಪಟ್ಟಿ ಸಿದ್ಧಪಡಿಸಲು ವಿಧಿವಿಜ್ಞಾನ ಲೇಖಪಾಲ ‘ಗ್ರಾಂಟ್ ಥೋರ್ನ್‌ಟನ್’ ವರದಿಗೆ ಉತ್ತರಿಸಲು ಅನುಮತಿ ಕೋರಿರುವ ಜಾರಿ ನಿರ್ದೇಶನಾಲಯ, ಇದು ಪ್ರಕರಣವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ ಎಂದು ಹೇಳಿದೆ. ಸಂಜಯ್ ಚಂದ್ರ ಹಾಗೂ ಅವರ ಸಹೋದರ ಅಜಯ್ ಚಂದ್ರ ಅವರು ಯುನಿಟೆಕ್‌ನ್ ಮಾಜಿ ಮಾಲಕರು-ಪ್ರವರ್ತಕರು.





