ಸಮಾನ ಮನಸ್ಕರಿಂದ 'ಸೌಹಾರ್ದ ಮಂಡ್ಯ' ಜಾಗೃತಿ ಕಾರ್ಯಕ್ರಮಕ್ಕೆ ನಿರ್ಧಾರ
ಪಿಇಎಸ್ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನೆಲೆ
ಮಂಡ್ಯ, ಫೆ.11: ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಒಂದೆರಡು ಕಾಲೇಜುಗಳಲ್ಲಿ ನಡೆದ ಕೋಮು ಪ್ರಚೋದನಕಾರಿ ನಡವಳಿಕೆಗಳನ್ನು ಗಮನಿಸಿದ ಜಿಲ್ಲೆಯ ಹಲವು ಜನಪರ ಸಂಘಟನೆಗಳ ಸದಸ್ಯರು ಗುರುವಾರ ಸಂಜೆ ಕರ್ನಾಟಕ ಸಂಘದ ಆವರಣದಲ್ಲಿ ರೈತನಾಯಕಿ ಶ್ರೀಮತಿ ಸುನಂದಾ ಜಯರಾಂ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚಿಸಿದರು.
ಯಾವುದೇ ರೀತಿಯ ಮೂಲಭೂತವಾದಿ ಗುಂಪುಗಳ ಪುಂಡಾಟಗಳಿಗೆ, ಅನುಚಿತ ವರ್ತನೆಗಳಿಗೆ ನಮ್ಮ ಜಿಲ್ಲೆಯ ಶಾಲೆ-ಕಾಲೇಜುಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ಮಾಡಿಕೊಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹ ಪತ್ರ ಸಲ್ಲಿಸುವುದು.
ಹಾಗೆಯೇ ನಮ್ಮ ಜಿಲ್ಲೆಯ ಎಲ್ಲ ಜಾತಿ ಮತ ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಹೈಕೋರ್ಟ್ ನ ನಿರ್ದೇಶನ ಬರುವರೆಗೂ ಈ ಹಿಂದೆ ಇದ್ದಂತೆ ‘ಯಥಾ ಸ್ಥಿತಿ’ಕಾಯ್ದುಕೊಳ್ಳಲು ಮನವರಿಕೆ ಮಾಡಿಕೊಡುವುದು ಮತ್ತು ನಂತರದ ದಿನಗಳಲ್ಲಿ ಈ ವಿಚಾರವಾಗಿ ದುಂಡು ಮೇಜಿನ ಸಭೆಯನ್ನು ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಮಂಡ್ಯದಲ್ಲಿ ಯಾವುದೇ ರೀತಿಯ ಕೋಮು ಗಲಭೆಗಳು ನಡೆಯಲು ಅವಕಾಶ ವಿರದಂತೆ ಇಲ್ಲಿನ ಜನರು ಬಹಳ ವರ್ಷಗಳಿಂದಲೂ ಒಳ್ಳೆಯ ಸಾಮರಸ್ಯ ಮತ್ತು ಸಹಬಾಳ್ವೆ ನಡೆಸುತ್ತಿದ್ದಾರೆ. ಇದಕ್ಕೆ ಯಾವುದೇ ಒಡಕು ಉಂಟಾಗದಂತೆ ಕೋಮು ಸಾಮರಸ್ಯವನ್ನು ಎಲ್ಲಾ ಹಂತದಲ್ಲೂ ಉಳಿಸಿಕೊಳ್ಳುವುದು ಮುಖ್ಯ ಎಂದು ಸಭೆ ಒಮ್ಮತದ ಅಭಿಪ್ರಾಯಪಟ್ಟಿತು.
ಹಾಗೆಯೆ 'ಸೌಹಾರ್ದ ಮಂಡ್ಯ' ಹೆಸರಿನಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರಲ್ಲಿ ಸಂವಿಧಾನ, ಸೌಹಾರ್ದ ಮತ್ತು ಸಾಮರಸ್ಯ, ಸಹಿಷ್ಣುತೆ ಕುರಿತಾಗಿ ಕರಪತ್ರಗಳು ಮತ್ತು ಸಂವಾದಗಳ ಮೂಲಕ ಮನವರಿಕೆ ಮಾಡಿಕೊಡಲು ಯೋಜನೆ ರೂಪಿಸಿ ಇದಕ್ಕೆ ಸಂಚಾಲಕರಾಗಿ ಪ್ರಾಂತ ರೈತ ಸಂಘದ ಮುಖಂಡ ಟಿ.ಎಲ್.ಕೃಷ್ಣೇಗೌಡ ಹಾಗೂ ಕರುನಾಡ ಸೇವಕರು ಸಂಘಟನೆಯ ಎಂ. ಬಿ. ನಾಗಣ್ಣರನ್ನು ನೇಮಿಸಿತು.
ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಜಯಪ್ರಕಾಶ ಗೌಡ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪ್ರಗತಿಪರ ಚಿಂತಕ ರಾಜೇಂದ್ರ ಪ್ರಸಾದ್, ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ. ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತ ಸಂಘದ ಟಿ. ಯಶವಂತ್, ಚಿಂತಕರಾದ ಪ್ರೊ.ಹುಲ್ಕೆರೆ ಮಹಾದೇವ, ರೈತ ಸಂಘದ ಮುದ್ದೇಗೌಡರ, ಜನಾರ್ಧನ್, ದಸಂಸ ಮುಖಂಡರಾದ ಬ್ಯಾಡರಹಳ್ಳಿ ಪ್ರಕಾಶ್, ಚಂದ್ರು, ಶ್ರಿನಿವಾಸ್, ದೇವರಾಜು, ಕುಬೇರಪ್ಪ, ಮೋಹನ್ ಕುಮಾರ್, ಗಂಗಾಧರ ತೇಜಸ್, ನಾರಾಯಣ, ಎಸ್ ಎಫ್ ಐ ಮುಖಂಡ ರುದ್ರೇಶ್, ಉಮೇಶ್, ನಾರಾಯಣ, ಸೋಮಣ್ಣ, ಮುಂತಾದವರು ಭಾಗವಹಿಸಿದ್ದರು.







