'ಸೌಹಾರ್ದ ಭಾರತ ಉಳಿಸಿ': ಸಿಪಿಎಂನಿಂದ ಕಲಬುರಗಿಯಲ್ಲಿ ಧರಣಿ

ಕಲಬುರಗಿ, ಫೆ.11: ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸಿಪಿಎಂ ವತಿಯಿಂದ 'ಭಾರತದ ಸೌಹಾರ್ದ ಉಳಿಸಿ; ಘೋಷಣೆಯಡಿ ಶುಕ್ರವಾರ ನಗರದ ಅಂಬೇಡ್ಕರ್ ವೃತದಲ್ಲಿ ಧರಣಿ ನಡೆಯಿತು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಹಿಜಾಬ್ - ಕೇಸರಿ ಶಾಲುಗಳ ಅನಗತ್ಯ ವಿವಾದದ ಮೂಲಕ ಸೌಹಾರ್ದ ಕದಡುವುದನ್ನು ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಸರಕಾರ ವಿಭಜನಕಾರಿ ಕೋಮುವಾದಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ರಾಜ್ಯ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲವಾಗಿದೆ. ಅದರ ನೇರ ಹೊಣೆಗಾರಿಕೆ ರಾಜ್ಯ ಗೃಹ ಸಚಿವರದಾಗಿದ್ದು, ಅವರು ಕೂಡಲೆ ರಾಜಿನಾಮೆ ನೀಡಬೇಕೆಂದು ಇಲ್ಲವಾದಲ್ಲಿ ಅವರನ್ನು ಸಂಪುಟದಿಂದ ವಜಾ ಮಾಡ ಬೇಕು ಎಂದು ಆಗ್ರಹಿಸಿದ್ದಾರೆ.
ನೀಲಾ ಮಾತನಾಡಿದ, ರಾಜ್ಯ ಸರಕಾರವು ತನ್ನ ಕೋಮುವಾದಿ ಮತ್ತು ವಿಭಜನಕಾರಿ ನೀತಿಯನ್ನು ಕೈಬಿಟ್ಟು, ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ರಾಜ್ಯದ ಜನತೆಯ ನದುವೆ ಸಾಮರಸ್ಯವನ್ನು ಮೂಡಿಸಲು ಮುಂದಾಗಬೇಕು. ವಿದ್ಯಾರ್ಥಿಗಳನ್ನು ಹಿ೦ಸಾಚಾರಕ್ಕೆ ನೂಕಲು ನೇರವಾಗಿ ಕುಮ್ಮಕ್ಕು ನೀಡಿರುವ ಸಂಘ ಪರಿವಾರ ಸೇರಿದಂತೆ ಕೆಲ ಸಂಘಟನೆಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ರಕ್ಷಣೆ ನೀಡದೆ ದಾಳಿಯನ್ನು ಬೆಂಬಲಿಸಿದ ಪೊಲೀಸ್ ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರಿಮಂತ ಬಿರಾದಾರ, ಶಾಂತಾ ಘಂಟೆ, ಪಾಂಡುರಂಗ ಮಾವಿನ, ಶೇಕಮ್ಮ ಕುರಿ, ಜಾವೇದ್ ಹುಸೇನ್, ಸಿದ್ದು ಹರವಾಳ್, ಮೇಘರಾಜ್ ಕಕಾರೆ, ನಾಗಯ್ಯ ಸ್ವಾಮಿ, ರೇಖಾ ಎಸ್. ರಂಗನ್, ಸುಧಾಮ ಧನ್ನಿ, ಎಂ.ಬಿ. ಸಜ್ಜನ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.







