ಫೆ.18ರಂದು ಪುರಭವನದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ನೆನಪು-ರಾಜ್ಯ ಮಟ್ಟದ ವಿಚಾರಗೋಷ್ಠಿ
ಮಂಗಳೂರು, ಫೆ.11: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರೈತ ಕಣ್ಮಣಿ ಕೆ.ಎಸ್.ಪುಟ್ಟಣ್ಣಯ್ಯ ನೆನಪು ಮತ್ತು ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ಫೆ..18ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಅಂದು ಪೂರ್ವಾಹ್ನ 10 ಗಂಟೆಗೆ ವಿಚಾರ ಸಂಕಿರಣದ ಉದ್ಘಾಟನೆಯನ್ನು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾೀಶ ಎಚ್.ಎನ್.ನಾಗಮೋಹನದಾಸ್ ನೆರವೇರಿಸುವರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸುವರು ಎಂದರು.
ಕರ್ನಾಟಕ ಸರಕಾರ ತಿದ್ದುಪಡಿ ಮಾಡಿರುವ ಭೂ ಸುಧಾರಣಾ ಕಾಯ್ದೆಘಿ, ಎಪಿಎಂಸಿ ಕಾಯ್ದೆ ಹಾಗೂ ನೂತನ ವಾಗಿ ಜಾರಿಗೆ ತಂದಿರುವ ಗೋಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆಯಿಂದಾಗಿ ರೈತರು ಹಾಗೂ ಗ್ರಾಮೀಣ ಬದುಕಿನ ಮೇಲಾದ ಪರಿಣಾಮಗಳ ಕುರಿತು ನಾಗಮೋಹನದಾಸ್ ಮಾತನಾಡಲಿದ್ದಾರೆ. ಒಟ್ಟು ನಾಲ್ಕು ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಚಾರಗಳ ಕುರಿತಂತೆ ವಿಷಯ ಮಂಡಿಸುವರು.
ಮೊದಲ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ ಅವರು ‘ಕೆ.ಎಸ್.ಪುಟ್ಟಣ್ಣಯ್ಯ ರೈತ ಚಳುವಳಿ ಹಾಗೂ ರಾಜಕಾರಣ’ದ ವಿಷಯದ ಕುರಿತಾಗಿ ಮಾತನಾಡಲಿದ್ದಾರೆ. ಎರಡನೆಯ ಗೋಷ್ಠಿಯಲ್ಲಿ ರೈತ ಮುಖಂಡ ಮಧುಚಂದನ್ ಎಸ್.ಸಿ ಅವರು ‘ಸಣ್ಣ ಹಿಡುವಳಿ ಹಾಗೂ ಲಾಭದಾಯಕ ಕೃಷಿ ಬದುಕು ಕುರಿತು ಸಮಗ್ರ ಮಾಹಿತಿ’, ಮೂರನೆಯ ಗೋಷ್ಠಿಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಅವರು ‘ಅಡಿಕೆ ಎಲೆ ಹಳದಿ ರೋಗ ಬಾತ ಸಂತ್ರಸ್ತ ರೈತರ ಸ್ವಯಂಘೋಷಿತ ಅರ್ಜಿ ಬಿಡುಗಡೆ ಹಾಗೂ ಸಮಗ್ರ ವರದಿ’ಯ ಕುರಿತು ಮಾತನಾಡುವರು. ನಾಲ್ಕನೆಯ ವಿಚಾರಗೋಷ್ಠಿಯಲ್ಲಿ ದ.ಕ ತೆಂಗು ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ‘ತೆಂಗು ಬೆಳೆಗಾರರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು’ ವಿಷಯದ ಕುರಿತಂತೆ ವಿಷಯ ಮಂಡನೆ ಮಾಡಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೋನ್ಸಾ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುಧಾಕರ ಜೈನ್ ಕೊಕ್ರಾಡಿ, ಸುರೇಂದ್ರ ಉಪಸ್ಥಿತರಿದ್ದರು.







