ದ.ಕ. ಜಿಲ್ಲಾಧಿಕಾರಿ ನೂತನ ಕಚೇರಿ ಕಾಮಗಾರಿ ಶೀಘ್ರ ಪೂರ್ಣ: ಸಚಿವ ಸುನಿಲ್ ಕುಮಾರ್
ಹೆಚ್ಚುವರಿ 29 ಕೋಟಿ ರೂ. ಅನುದಾನಕ್ಕೆ ಕ್ರಮ

ಮಂಗಳೂರು, ಫೆ.11: ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಸುಮಾರು ಶೇ. 70ರಷ್ಟು ಪೂರ್ಣಗೊಂಡಿದ್ದು, ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ತ್ರೈಮಾಸಿಕ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 29 ಕೋಟಿ ರೂ.ಗಳ ಬೇಡಿಕೆ ಇರಿಸಲಾಗಿದ್ದು, ಈ ಬಗ್ಗೆ ಸಂಸದರು, ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅನುದಾನ ಬಿಡುಗಡೆ ಕ್ರಮ ವಹಿಸಿ ಕಚೇರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಫೆ. 19ರೊಳಗೆ ವಿಕಲಚೇತನರ ಬಾಕಿ ಅರ್ಜಿ ವಿಲೇ
ವಿಕಲಚೇತನರ ಮಾಶಾಸನ ಅರ್ಜಿ ಪರಿಶೀಲನೆ ಬಗ್ಗೆ ಚರ್ಚೆ ನಡೆದಿದ್ದು, 2800 ಮಂದಿಯ ಅರ್ಜಿ ವಿಲೇ ಆಗದೆ ಬಾಕಿ ಆಗಿರುವುದು ಗಮನಕ್ಕೆ ಬಂದಿದೆ. ಫೆ. 19ರೊಳಗೆ ಎಲ್ಲಾ ಅರ್ಜಿಗಳನ್ನು ವಿಲೇಗೊಳಿಸಿ ಅವರಿಗೆ ಮಾಸಾಶನ ನೀಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ. ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿ 3600 ಜನ ರ್ಜಿ ಸಲ್ಲಿಸಿದ್ದು, ಕಾರ್ಡ್ ಸಿಗದವರಿಗೆ ಕ್ರಮ ಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯಡಿ ಪ್ರಸಕ್ತ 14000 ಫಲಾನುಭವಿಗಳನ್ನು ಗುರುತಿಸಲಾಗಿದೆ. ಯಾವುದೇ ರೈತರ ಮಕ್ಕಳು ಈ ವಿದ್ಯಾನಿಧಿಯಿಂದ ಹೊರಗುಳಿಯದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಮುಂದಿನ ವಾರ ಸ್ಮಾರ್ಟ್ ಸಿಟಿ, ಮನಪಾ ಸಂಬಂಧಿತ ಚರ್ಚೆ
ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿಸ್ತೃತ ಸಭೆ ಮುಂದಿನ ವಾರ ನಡೆಸಲಾಗುವುದು. ರಾಷ್ಟ್ರೀಯ ಹೆದಾರಿ ಹಾಗೂ ಜಿಲ್ಲೆಗೆ ಬರುವ ಯೋಜನೆಗಳ ಬಗ್ಗೆ ಅಧಿವೇಶನ ಸಂದರ್ಭ ಸೂಕ್ತ ಕ್ರಮ ವಹಿಸಲಾಗುವುದು. ಜಿಲ್ಲಾ ಮಟ್ಟದ ಜಲಜೀವನ್ ಮಿಶನ್ ಯೋಜನೆಯಡಿ 310 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದೆ. ಒಟ್ಟು 468 ಕಾಮಗಾರಿಗಳಲ್ಲಿ 168 ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ವೇಗವನ್ನು ಹೆಚ್ಚಿಸಿ 2023ರ ಒಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಒಟ್ಟು 28000 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸಲಾಗಿದೆ. 58000 ಮನೆಗಳಿಗೆ ಮುಂದಿನ ಮಾರ್ಚ್‌ಗೊಳಗೆ ಪೂರ್ಣಗೊಳಿಸಲು ನಿರ್ಣಯಿಸಲಾಗಿದೆ. 94 ಸಿ ಹಾಗೂ 94ಸಿಸಿ ಯಡಿ 53000 ಅರ್ಜಿಗಳು ಕಳೆದ ಐದು ವರ್ಷಗಳಲ್ಲಿ ತಿರಸ್ಕೃತವಾಗಿದೆ. ಸಕಾರಣವಿಲ್ಲದೆ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅರ್ಹತೆ ಇರುವವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕ ಹರೀಶ್ ಪೂಂಜಾ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಉಪಸ್ಥಿತರಿದ್ದರು.
ಮಾ.1ರಿಂದ ತಾಲೂಕು ಮಟ್ಟದ ಕಂದಾಯ ಮೇಳ
ಫೆ. 19ರಿಂದ 28ರವರೆಗೆ ಗ್ರಾಮ ಪಂಚಾಯತ್‌ನಿಂದ ಹಿಡಿದು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಕಡತ ವಿಲೇವಾರಿ ಅಭಿಯಾನ ನಡೆಯಲಿದೆ. ಬಳಿಕ ಮಾ. 1ರಿಂದ ನಾಲ್ಕೈದು ದಿನಗಳ ಕಾಲ ತಾಲೂಕು ಮಟ್ಟದಲ್ಲಿ ಕಂದಾಯ ಮೇಳ ನಡೆಯಲಿದೆ. ಅಭಿಯಾನದಲ್ಲಿ ಕೋವಿಡ್ ಸಂದರ್ಭದಲ್ಲಿ ವಿಲೇ ಆಗದೆ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ವಿಲೇ ಮಾಡಲಾಗುವುದು. ಆಡಳಿತಕ್ಕೆ ಚುರುಕು ಮುಟ್ಟಿಸುವ ಪ್ರಯತ್ನವಾಗಿ ಹಾಗೂ ಅರ್ಜಿದಾರರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ಅಭಿಯಾನ ನಡೆಸುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದರು.
ಕಂದಾಯ ಮೇಳೆದಲ್ಲಿ ಕೊನೆಯಲ್ಲಿ ಪಲಾನುಭವಗಳಿಗೆ ಹೇಶನ ಕಾರ್ಡ್, ಹಕ್ಕುಪತ್ರ ವಿತರಿಸುವ ಕಾರ್ಯ ನಡೆಯಲಿದೆ. ಜಿಲ್ಲಾಧಿಕಾರಿ, ಸಿಇಒ ಗ್ರಾಮ ಮಟ್ಟದವರೆಗೆ ಪ್ರವಾಸ ಕೈಗೊಳ್ಳಬೇಕು. ಕೆಳ ಹಂತದ ಅಧಿಕಾರಿ ಗಳನ್ನು ತಲುಪಬೇಕು. ಪ್ರತಿನಿತ್ಯದ ಇಲಾಖಾವಾರು ಕಡತ ವಿಲೇವಾರಿ ಅಂಕಿ ಅಂಶ ಹಿರಿಯ ಅಧಿಕಾರಿಗಳಿಗೆ ತಲುಪಬೇಕು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ತಾಲೂಕಿಗೊಂದು ಗೋಶಾಲೆ: ದೇವಸ್ಥಾನ ಆಡಳಿತ ಮೂಲಕ ನಿರ್ವಹಣೆ
ಜಿಲ್ಲಾ ಮಟ್ಟದ ಗೋಶಾಲೆಯನ್ನು ರಾಮಕುಂಜದಲ್ಲಿ ನಿರ್ಮಿಸಲು ಜಾಗ ಗುರುತಿಸುವ ಕಾರ್ಯ ನಡೆದಿದೆ. ಈ ನಡುವೆ ಶಾಸಕರ ಆಸಕ್ತಿ ಮೇರೆಗೆ ತಾಲೂಕಿಗೊಂದು ಗೋಶಾಲೆ ನಿರ್ಮಾಣ ಮಾಡಿ ದೇವಸ್ಥಾನ ಆಡಳಿತ ಮಂಡಳಿ ಮೂಲಕ ನಿರ್ವಹಣೆ ಬಗ್ಗೆ ಚರ್ಚಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಮಹಾಲಿಂಗೇಶ್ವರ, ಪೊಳಲಿ, ಕಟೀಲು, ಸೌತಡ್ಕ ದೇವಸ್ಥಾನಗಳ ಮೂಲಕ ತಾಲೂಕು ಮಟ್ಟದ ಗೋಶಾಲೆ ನಿರ್ವಹಿಸುವ ಪ್ರಸ್ತಾವೆಗೆ ಒಪ್ಪಿಗೆ ಸೂಚಿಸಲಾಗಿದೆ. ಸ್ಥಳವನ್ನು ಗುರಿತಿಸಲು ಸೂಚನೆ ನೀಡಿದ ಹಿನ್ನೆಲೆಯಲ್ಲೆ ಕೆಲವೆಡೆ ಸ್ಥಳ ಗುರುತಿಸಲಾಗಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.








