ಶಿಕ್ಷಣ ಹಕ್ಕು ಕಾಯಿದೆ ಪರಿಣಾಮಕಾರಿ ಜಾರಿಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಆಗ್ರಹ
'‘ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮರಳಿ ಮುಖ್ಯ ವಾಹಿನಿಗೆ ತರಬೇಕು’'

ಬೆಂಗಳೂರು, ಫೆ.11: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮಾನವ ಸಂಕುಲವನ್ನು ಸಂರಕ್ಷಿಸಲು ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಯಿತು. ಮೂರು ಅಲೆಗಳ ಮಧ್ಯೆ ಸ್ವಲ್ಪ ಕಡಿಮೆಯಾದ ಸಂದರ್ಭದಲ್ಲಿ ಅಲ್ಪಕಾಲ ಶಾಲೆಗಳನ್ನು ತೆರೆದದ್ದನ್ನು ಬಿಟ್ಟರೆ, ಸುಮಾರು ಎರಡು ವರ್ಷಗಳ ಕಾಲ ಶಾಲೆಗಳನ್ನು ಧೀರ್ಘಾವಧಿಗೆ ಮುಚ್ಚಿದ ಪರಿಣಾಮ, ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಬಾರೀ ಬಿಕ್ಕಟ್ಟು ಉಂಟಾಗಿದ್ದು ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ ಎಂದು ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಶಾಲೆ ತೆರೆಯುವ ಮುಚ್ಚುವ ಕಣ್ಣಾಮುಚ್ಚಾಲೆ ಕಳೆದ ಎರಡು ವರ್ಷದಿಂದ ನಿರಂತರವಾಗಿ ನಡೆದಿದೆ. ಜ.31ರಂದು ಮತ್ತೆ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಒಟ್ಟಾರೆ, ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವೂ ಎಂದೂ ಕಾಣದ ಬಿಕ್ಕಟ್ಟು ಮತ್ತು ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ತಾವು ಆಯವ್ಯಯವನ್ನು ಮಂಡಿಸಲು ಸಿದ್ಧತೆಯನ್ನು ನಡೆಸಿದ್ದೀರಿ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ, ತಮ್ಮ ಮುಂದೆ ಈ ಕೆಳಗಿನ ಅಂಶಗಳನ್ನು ಮಂಡಿಸುತ್ತಿದ್ದೇನೆ. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ನ್ನು ಜಾರಿಗೊಳಿಸಲಾಗಿದೆ. ಕಾಯಿದೆ ಜಾರಿಯಾಗಿ 12 ವರ್ಷಗಳು ಕಳೆದರೂ ರಾಜ್ಯದಲ್ಲಿ ಕಾಯಿದೆಯನ್ನು ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕೆಲಸ ನಡೆದಿಲ್ಲವೆಂಬುದನ್ನು ನಾನು ನೋವಿನಿಂದ ಹೇಳಬೇಕಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸಿದ 12 ವರ್ಷಗಳ ನಂತರ ಆರ್‍ಟಿಇ ಮೂಲ ಸೌಕರ್ಯಗಳ ಅನುಸರಣೆ ಕೇವಲ ಶೇ.23.6. ಅಂದರೆ, ನೂರು ಸರಕಾರಿ ಶಾಲೆಗಳಲ್ಲಿ ಕಲಿಕಾ ಕೋಣೆ, ನಿಗದಿತ ಶಿಕ್ಷಕರು, ಹುಡುಗ-ಹುಡಗಿಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ಗ್ರಂಥಾಲಯ, ಕಲಿಕೋಪಕರಣ, ಪೀಠೋಪಕರಣ, ಆಟದ ಮೈದಾನ, ಶಾಲಾ ರಾಂಪ್, ಇತ್ಯಾದಿ ಎಲ್ಲ ಸೌಲಭ್ಯ ಇರುವ ಶಾಲೆಗಳು ಕೇವಲ 23. ಉಳಿದ 77 ಶಾಲೆಗಳಲ್ಲಿ ಈ ಎಲ್ಲ ಸೌಲಭ್ಯಗಳು ಪೂರ್ಣವಾಗಿ ಲಭ್ಯವಿಲ್ಲ. ಇದು ನಿಜಕ್ಕೂ ಶಿಕ್ಷಣ ಹಕ್ಕು ಮತ್ತು ಸಂವಿಧಾನದ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲು ಆಯವ್ಯಯದಲ್ಲಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ನಾನು ತಮ್ಮಲ್ಲಿ ಕಳಕಳಿಯಿಂದ ಆಗ್ರಹಿಸುತ್ತೇನೆ ಎಂದು ನಿರಂಜನಾರಾಧ್ಯ ತಿಳಿಸಿದ್ದಾರೆ.
ಸರಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಸ್ತೃತ ಸಂಶೋಧನೆಯ ಮೂಲಕ ‘ಸರಕಾರಿ ಶಾಲೆಗಳ ಸಬಲೀಕರಣ ವರದಿ’ಯನ್ನು 2017 ರಲ್ಲಿ ಸಲ್ಲಿಸಿದೆ. ಆದರೆ, ಇಲ್ಲಿಯವರೆಗೆ ಈ ವರದಿಯನ್ನು ಜಾರಿಗೊಳಿಸಲು ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಮುಂದಿನ ಅಧಿವೇಶನದಲ್ಲಿ ಈ ವರದಿಯನ್ನು ಸದನದಲ್ಲಿ ಅಂಗೀಕರಿಸಿ ಜಾರಿಗೊಳಿಸಲು ಆಯವ್ಯಯದಲ್ಲಿ ಬದ್ಧತೆ ಪ್ರದರ್ಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸಲು ಅಗತ್ಯವಾದ ಸೇತುಬಂಧ ಕಾರ್ಯಕ್ರಮ, ಪೂರಕ ಕಲಿಕಾ ಚಟುವಟಿಕೆ, ಸಮುದಾಯ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ ‘ಮರಳಿ ಕಲಿಕೆಗೆʼ ಕಲಿಕಾ ಕಾರ್ಯಕ್ರಮವನ್ನು ಸಾಮೂಹಿಕವಾಗಿ ಹಮ್ಮಿಕೊಳ್ಳಲು ಮತ್ತು ಮಕ್ಕಳಿಗೆ ಅಗತ್ಯವಾದ ಪೂರಕ ಕಲಿಕಾ ಸಾಮಗ್ರಿ ಮತ್ತು ಕಾರ್ಯ ಪುಸ್ತಕಗಳನ್ನು ಒದಗಿಸಲು ವಿಶೇಷ ಅನುದಾನ ಆಯವ್ಯಯದಲ್ಲಿ ಬಿಡುಗಡೆ ಮಾಡಬೇಕು ಎಂದು ನಿರಂಜನಾರಾಧ್ಯ ವಿನಂತಿಸಿದ್ದಾರೆ.
ಧೀರ್ಘಕಾಲ ಶಾಲೆಗಳು ಮುಚ್ಚಿದ್ದ ಕಾರಣ ಸಾವಿರಾರು ಮಕ್ಕಳು ಶಾಲೆ ತೊರೆದು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಆ ಮಕ್ಕಳನ್ನು ಪುನಃ ಶಾಲಾ ಮುಖ್ಯ ವಾಹಿನಿಗೆ ತರಬೇಕಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಮರಳಿ ಶಾಲೆಗೆ’ ಅಭಿಯಾನವನ್ನು ಒಂದು ಸಾಮಾಜಿಕ ಆಂದೋಲನದ ರೀತಿಯಲ್ಲಿ ನಡೆಸಲು ಮತ್ತು ಆ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ವಿಶೇಷ ಸೇತುಬಂಧ ಹಾಗು ಕಲಿಕಾ ವಂಚಿತ ಮಕ್ಕಳಿಗೆ ವಿಶೇಷ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸಲು ಪ್ರತೀ ಶಾಲೆಗೆ ವಿಶೇಷ ಅನುದಾನವನ್ನು ಒದಗಿಸಬೇಕೆಂದು ಅವರು ವಿನಂತಿಸಿದ್ದಾರೆ.
ರಾಜ್ಯದಲ್ಲಿ ಖಾಲಿ ಇರುವ ಸುಮಾರು 25,000 ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 3 ರಿಂದ 18 ವರ್ಷದವರೆಗೆ ವಿಸ್ತರಿಸಿ ಬಾಲ ಕಾರ್ಮಿಕ ಪದ್ಧತಿಯನ್ನು 18 ವರ್ಷದವರೆಗೆ ನಿಷೇಧಿಸಲು ಆಯವ್ಯಯದಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂದು ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.
ಮುಂಬರುವ ಆಯವ್ಯಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ ಅದನ್ನು ಗಟ್ಟಿಗೊಳಿಸಲು ಮೇಲಿನ ಅಗತ್ಯ ಅನುದಾನಗಳನ್ನು ಒದಗಿಸಬೇಕೆಂದು ನಿರಂಜನಾರಾಧ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







