ಸಾಗರ: ಪ್ರತಿಭಟನಾ ನಿರತ ಬ್ಯಾಂಕ್ ಮಿತ್ರ ಉದ್ಯೋಗಿ ಆತ್ಮಹತ್ಯೆಗೆ ಯತ್ನ

ಪ್ರತಿಭಟನಾ ನಿರತ ಬ್ಯಾಂಕ್ ಸಿಬ್ಬಂದಿ
ಸಾಗರ : ತಾಲೂಕಿನ ಕೆಳದಿ ಕೆನರಾ ಬ್ಯಾಂಕ್ ಎದುರು ಕೆಲಸದಿಂದ ವಜಾಗೊಳಿಸಿರುವ ನೀತಿಯನ್ನು ಖಂಡಿಸಿ ಬ್ಯಾಂಕ್ ಮಿತ್ರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಶುಕ್ರವಾರ 'ಬ್ಯಾಂಕ್ಮಿತ್ರ' ಹುದ್ದೆಯಿಂದ ವಜಾಗೊಂಡಿರುವ ಸಿಬ್ಬಂದಿಯೋರ್ವರು ಸ್ಥಳದಲ್ಲಿಯೇ ವಿಷ ಸೇವಿಸಿ, ತೀವೃ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಕೆಳದಿ ಕೆನರಾ ಬ್ಯಾಂಕ್ನಿಂದ ದೇವು ಸೂರಗುಪ್ಪೆ ಹಾಗೂ ಶಕುಂತಲಾ ಅವರನ್ನು ಬ್ಯಾಂಕ್ಮಿತ್ರ ಕೆಲಸದಿಂದ ವಜಾಗೊಳಿಸಲಾಗಿತ್ತು. ದೇವು ಸೂರಗುಪ್ಪೆ ಮತ್ತು ಶಕುಂತಲಾ ಅವರನ್ನು ಪುನರ್ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಬ್ಯಾಂಕ್ ಮಿತ್ರರ ಸಂಘ, ಮಾನವಹಕ್ಕು ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ದೀವರ ಯುವ ವೇದಿಕೆ ಕೆಳದಿ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುತ್ತಿದೆ. ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆಯೆ ಶಕುಂತಲಾ ಅವರು ವಿಷ ಸೇವನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಅವರನ್ನು ಚಿಕಿತ್ಸೆಗೆ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಮಿತ್ರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವು ಸೂರಗುಪ್ಪೆ, ಬ್ಯಾಂಕ್ ಮಿತ್ರರನ್ನು ಖಾಸಗಿ ಕಂಪನಿಗಳು ತೀವೃ ಶೋಷಣೆ ಮಾಡುತ್ತಿದೆ. ಹಿಂದೆ ವಿಷನ್ ಇಂಡಿಯಾ ಕಂಪನಿ ನಮ್ಮನ್ನು ನೇಮಿಸಿಕೊಂಡು 50ಸಾವಿರ ರೂ. ಠೇವಣಿ ಪಡೆದಿತ್ತು. ಆದರೆ ಕಂಪನಿ ಅವಧಿ ಮುಗಿದಿದ್ದರೂ ನಮ್ಮ ಠೇವಣಿ ಹಣ ಹಿಂದಕ್ಕೆ ನೀಡಿಲ್ಲ. ಈಗ ಗ್ರಾಮ ತರಂಗ ಸಂಸ್ಥೆ ಗುತ್ತಿಗೆ ಹಿಡಿದಿದ್ದು, ಈ ಕಂಪನಿ ಸಹ ಬ್ಯಾಂಕ್ ಮಿತ್ರರಿಂದ ಹಣ ಕೇಳುತ್ತಿದೆ. ಠೇವಣಿ ಹಿಂದಿರುಗಿಸುವಂತೆ ಒತ್ತಾಯಿಸಿದ್ದಕ್ಕೆ ಗ್ರಾಮ ತರಂಗ ಸಂಸ್ಥೆ ನನ್ನನ್ನು ಮತ್ತು ಶಕುಂತಲಾ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಅವಮಾನ ತಾಳಲಾರದೆ, ಸಾಲ ತೀರಿಸಲಾಗದೆ ಶಕುಂತಲಾ ಅವರು ವಿಷ ಸೇವನೆ ಮಾಡಿದ್ದಾರೆ. ಇದರ ಹೊಣೆಯನ್ನು ಬ್ಯಾಂಕ್ ಹೊತ್ತುಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಕ್ಷಣಾ ವೇದಿಕೆ ಅಧ್ಯಕ್ಷ ಮನೋಜ್ ಕುಗ್ವೆ ಮಾತನಾಡಿ, ಬ್ಯಾಂಕ್ ಮಿತ್ರರನ್ನು ನೇಮಿಸಿಕೊಂಡ ಗುತ್ತಿಗೆದಾರ ಕಂಪನಿ ಶೋಷಣೆ ತಡೆದುಕೊಳ್ಳಲಾಗದೆ ಶಕುಂತಲಾ ಅವರು ವಿಷ ಸೇವನೆ ಮಾಡಿದ್ದಾರೆ. ಇದಕ್ಕೆ ಬ್ಯಾಂಕ್ ಮತ್ತು ಗುತ್ತಿಗೆದಾರ ಕಂಪನಿಯೇ ಹೊಣೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ಬ್ಯಾಂಕ್ ಮಿತ್ರರ ಹೋರಾಟಕ್ಕೆ ನಮ್ಮ ಸಮಿತಿ ಸಂಪೂರ್ಣ ಬೆಂಬಲ ನೀಡಿದೆ. ತಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಶಕುಂತಲಾ ಅವರು ವಿಷ ಸೇವನೆ ಮಾಡಿದ್ದಾರೆ. ಬ್ಯಾಂಕ್ ಮತ್ತು ಗುತ್ತಿಗೆ ಕಂಪನಿ ಶಕುಂತಲಾ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಅವರನ್ನು ಕೆಲಸಕ್ಕೆ ಪುನಃ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಾನವಹಕ್ಕು ಹೋರಾಟ ಸಮಿತಿಯ ಶಶಿಕಾಂತ್ ಎಂ.ಎಸ್. ಮಾತನಾಡಿ, ಗುರುವಾರದಿಂದ ಬ್ಯಾಂಕ್ ಮಿತ್ರರು ಪ್ರತಿಭಟನೆ ಮಾಡುತ್ತಿದ್ದಾಗ್ಯೂ ಗುತ್ತಿಗೆ ಕಂಪನಿ ಯಾವುದೇ ರೀತಿಯ ಸ್ಪಂದನೆ ತೋರಿಸಿಲ್ಲ. ಗುತ್ತಿಗೆ ಕಂಪನಿ ಕಿರುಕುಳ ತಾಳಲಾರದೆ ಶಕುಂತಲಾ ಅವರು ವಿಷ ಸೇವನೆ ಮಾಡಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ರಮೇಶ್ ರೆಡ್ಡಿ, ಪ್ರೀತಿ, ನಾಗರಾಜ್, ವೈ.ಎನ್.ಹುಬ್ಬಳ್ಳಿ, ಮಾರುತಿ ಇನ್ನಿತರರು ಹಾಜರಿದ್ದರು.







