ವೆಸ್ಟ್ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿ: ರಾಹುಲ್,ಅಕ್ಷರ್ ಪಟೇಲ್ ಔಟ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಗೆ ಅವಕಾಶ

ಋತುರಾಜ್ ಗಾಯಕ್ವಾಡ್, Photo:twitter
ಹೊಸದಿಲ್ಲಿ, ಫೆ.11: ಮುಂಬರುವ ವೆಸ್ಟ್ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಿಂದ ಕೆ.ಎಲ್.ರಾಹುಲ್ ಹಾಗೂ ಅಕ್ಷರ್ ಪಟೇಲ್ ಹೊರಗುಳಿದಿದ್ದಾರೆ. ಈ ಇಬ್ಬರಿಂದ ತೆರವಾದ ಸ್ಥಾನವನ್ನು ಋತುರಾಜ್ ಗಾಯಕ್ವಾಡ್, ದೀಪಕ್ ಹೂಡ ತುಂಬಲಿದ್ದಾರೆ.
ಬಿಸಿಸಿಐ ಶುಕ್ರವಾರ ಪತ್ರಿಕಾಪ್ರಕಟನೆಯ ಮೂಲಕ ಈ ಘೋಷಣೆ ಮಾಡಿದೆ. ಉಪ ನಾಯಕ ಕೆ.ಎಲ್.ರಾಹುಲ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಮುಂಬರುವ ಫೆಬ್ರವರಿ 16ರಿಂದ ಕೋಲ್ಕತಾದಲ್ಲಿ ಆರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದೆ.
ರಾಹುಲ್ ಫೆ.9ರಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಅಕ್ಷರ್ ಪಟೇಲ್ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ(ಎನ್ಸಿಎ) ತೆರಳಲಿದ್ದಾರೆ. ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ರಾಹುಲ್ ಹಾಗೂ ಅಕ್ಷರ್ ಪಟೇಲ್ ಬದಲಿಗೆ ಋತುರಾಜ್ ಗಾಯಕ್ವಾಡ್ ಹಾಗೂ ದೀಪಕ್ ಹೂಡಾರನ್ನು ಆಯ್ಕೆ ಮಾಡಿದೆ ಎಂದು ಬಿಸಿಸಿಐ ತಿಳಿಸಿದೆ.
ಭಾರತದ ಟ್ವೆಂಟಿ-20 ತಂಡ: ರೋಹಿತ್ ಶರ್ಮಾ(ನಾಯಕ) ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯಿ, ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಮುಹಮ್ಮದ್ ಸಿರಾಜ್, ಭುವನೇಶ್ವರ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಋತುರಾಜ್ ಗಾಯಕ್ವಾಡ್ ಹಾಗೂ ದೀಪಕ್ ಹೂಡ.







