ಮೂರನೇ ಏಕದಿನ: ವಿಂಡೀಸ್ ವಿರುದ್ದ ಭಾರತಕ್ಕೆ ಹ್ಯಾಟ್ರಿಕ್ ಜಯ
ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದ ರೋಹಿತ್ ಬಳಗ, ಸಿರಾಜ್, ಕೃಷ್ಣಗೆ ತಲಾ ಮೂರು ವಿಕೆಟ್

Photo:BCCI
ಅಹಮದಾಬಾದ್, ಫೆ.11: ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಬ್ಯಾಟಿಂಗ್, ಪ್ರಸಿದ್ಧ ಕೃಷ್ಣ, ಮುಹಮ್ಮದ್ ಸಿರಾಜ್, ದೀಪಕ್ ಚಹಾರ್ ಹಾಗೂ ಕುಲದೀಪ್ ಯಾದವ್ ಅವರ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಶುಕ್ರವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು 96 ರನ್ಗಳ ಅಂತರದಿಂದ ಹೀನಾಯವಾಗಿ ಸೋಲಿಸಿತು.
ಇದರೊಂದಿಗೆ ಹ್ಯಾಟ್ರಿಕ್ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ಬಳಗವು 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್ಸ್ವೀಪ್ ಸಾಧಿಸಿದೆ.
ಗೆಲ್ಲಲು 265 ರನ್ ಗುರಿ ಬೆನ್ನಟ್ಟಿದ್ದ ವೆಸ್ಟ್ಇಂಡೀಸ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 37.1 ಓವರ್ಗಳಲ್ಲಿ ಕೇವಲ 169 ರನ್ಗೆ ಗಂಟುಮೂಟೆ ಕಟ್ಟಿತು. ವಿಂಡೀಸ್ ಪರ ಕೆಳ ಕ್ರಮಾಂಕದಲ್ಲಿ ಒಡಿಯನ್ ಸ್ಮಿತ್(36) ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಪೂರನ್ 34 ರನ್ ಗಳಿಸಲಷ್ಟೇ ಶಕ್ತರಾದರು. ಭಾರತದ ಪರ ಕನ್ನಡಿಗ ಕೃಷ್ಣ(3-27)ಹಾಗೂ ಸಿರಾಜ್(3-29) ತಲಾ 3 ವಿಕೆಟ್ಗಳನ್ನು ಪಡೆದರೆ, ದೀಪಕ್ ಚಹಾರ್(2-41) ಹಾಗೂ ಕುಲದೀಪ್(2-51)ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.







