ಎಸ್‌ಡಿಪಿಐ ಗೆಲುವಿನಿಂದ ರಘುಪತಿ ಭಟ್ ಗೆ ಭಯ: ಅಥಾವುಲ್ಲಾ ಜೋಕಟ್ಟೆ ಆರೋಪ
ಉಡುಪಿ, ಫೆ.11: ಹಿಜಾಬ್- ಕೇಸರಿ ವಿವಾದ ಕುರಿತು ಶಾಸಕ ರಘುಪತಿ ಭಟ್ ಮಾಡಿರುವ ಆರೋಪಗಳೆಲ್ಲವೂ ನಿರಾಧಾರ. ಅದಕ್ಕೆ ಯಾವುದೇ ಸಾಕ್ಷಿ ಗಳಿಲ್ಲ. ಕಾಪು ಪುರಸಭೆಯಲ್ಲಿ ಎಸ್‌ಡಿಪಿಐ ಮೂರು ಸ್ಥಾನ ಗೆದ್ದ ಕೂಡಲೇ ಶಾಸಕ ರಘುಪತಿ ಭಟ್ ಭಯಭೀತರಾಗಿದ್ದಾರೆ. ಹಾಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲ ಜೋಕಟ್ಟೆ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಆದರೂ ಕಾಪು ಪುರಸಭೆಯಲ್ಲಿ ಎಸ್‌ಡಿಪಿಐ ಮೂರು ಸೀಟು ಬಂದ ಕೂಡಲೇ ರಘುಪತಿ ಭಟ್ ಹೆದರಿಬಿಟ್ಟಿದ್ದಾರೆ. ಅವರಿಗೆ ಬಹಳಷ್ಟು ಹೆದರಿಕೆ ಶುರುವಾಗಿದೆ ಎಂದು ವ್ಯಂಗ್ಯ ವಾಡಿದರು.
ಹಿಜಾಬ್ -ಕೇಸರಿ ವಿವಾದ ರಾಜಕೀಯ ಲಾಭ ಪಡೆಯುವ ಉದ್ಧೇಶದಿಂದ ಹುಟ್ಟಿಕೊಂಡ ವಿವಾದವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಕೋನದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿರುವ ಷಡ್ಯಂತ್ರದ ಭಾಗ ಇದಾಗಿದೆ ಎಂದು ದೂರಿದ ಅವರು, ಧಾರ್ಮಿಕ ಸ್ವಾತಂತ್ರದ ಪ್ರಕಾರ ಧಾರ್ಮಿಕ ಆಚರಣೆಗಳನ್ನು ಪಾಲಿಸಿಕೊಂಡು ಹೋಗಲು ಎಲ್ಲರಿಗೂ ಅವಕಾಶ ಇದೆ. ಆ ನೆಲೆಯಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಹೋಗುವುದು ಅವರ ವೈಯಕ್ತಿಕ ವಿಚಾರವಾಗಿದೆ ಎಂದರು.
ಉಡುಪಿ ಬಾಲಕಿಯರ ಸರಕಾರಿ ಕಾಲೇಜಿನಲ್ಲಿ ಹಿಂದಿನಿಂದಲೂ ಮುಸ್ಲಿಮ್ ವಿದ್ಯಾರ್ಥಿಗಳು ಸ್ಕಾರ್ಫ್ ಹಾಕಿ ಕೊಂಡು ಹೋಗುತ್ತಿದ್ದಾರೆ. ಈವರೆಗೂ ಇಲ್ಲದ ಸಮಸ್ಯೆ ಈಗ ಒಮ್ಮೇಲೆ ಉದ್ಭವಿಸಲು ಕಾರಣವೇನು? ಶೈಕ್ಷಣಿಕ ವರ್ಷದ ಕೊನೆಯಲ್ಲಿ ಈ ಸಮಸ್ಯೆ ಯಾಕೆ ಸೃಷ್ಟಿಯಾಯಿತು ಎಂದು ಪ್ರಶ್ನಿಸಿದ ಅವರು, ಎಸ್‌ಡಿಪಿಐಗೆ ಕೇವಲ ಮುಸ್ಲಿಮರು ಮಾತ್ರವಲ್ಲ, ಎಲ್ಲ ವರ್ಗದವರು ಮತ ನೀಡುತ್ತಿದ್ದಾರೆ. ಎಲ್ಲ ಸಮುದಾಯ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದರು.