ಕಾಶ್ಮೀರ, ಪಶ್ಚಿಮಬಂಗಾಳ, ಕೇರಳ ಕುರಿತು ಆದಿತ್ಯನಾಥ್ ಹೇಳಿಕೆ: ಲೋಕಸಭೆಯಲ್ಲಿ ಸಭಾ ತ್ಯಾಗ ಮಾಡಿದ ಪ್ರತಿಪಕ್ಷ

ಹೊಸದಿಲ್ಲಿ, ಫೆ. 10: ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದೇ ಇದ್ದರೆ ಕಾಶ್ಮೀರ, ಪಶ್ಚಿಮಬಂಗಾಳ ಅಥವಾ ಕೇರಳದ ಸ್ಥಿತಿಗೆ ಉತ್ತರಪ್ರದೇಶ ಬರಲಿದೆ ಎಂಬ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷದ ಸದಸ್ಯರು ಲೋಕಸಭೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಸಭಾ ತ್ಯಾಗ ನಡೆಸಿದವು.
ಶುಕ್ರವಾರ ಅಪರಾಹ್ನ ಸದನದ ಕಲಾಪ ಆರಂಭವಾದ ಕೂಡಲೇ ಈ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಅವರು ಮುಂದೂಡಿಕೆ ಗೊತ್ತುವಳಿ ನೋಟಿಸು ನೀಡಿದರು. ಅವರ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಈ ರೀತಿಯ ಹೇಳಿಕೆ ನೀಡುತ್ತಿರುವುದು ಅವಮಾನಕರ. ಈ ವಿಷಯವನ್ನು ಚರ್ಚೆಗೆ ಕೈಗೆತ್ತುಕೊಳ್ಳಿ ಎಂದು ಚೌಧುರಿ ಹೇಳಿದರು.
ಇದನ್ನು ಅನುಸರಿಸಿ ಕಾಂಗ್ರೆಸ್ ಹಾಗೂ ಟಿಎಂಸಿ ಸದಸ್ಯರು ಪ್ರತಿಭಟನೆ ನಡೆಸಲು ತಮ್ಮ ಆಸನ ತ್ಯಜಿಸಿದರು. ಆದರೆ, ಸ್ಪೀಕರ್ ಓಂ ಬಿರ್ಲಾ ಪ್ರಶ್ನೆ ವೇಳೆಯನ್ನು ಮುಂದುವರಿಸಿದರು. ಪ್ರಶ್ನೆ ವೇಳೆಯ ಬಳಿಕ ಸಂಸದರು ಈ ವಿಷಯ ಎತ್ತಬಹುದು ಎಂದು ಅವರು ಹೇಳಿದರು. ಆದರೆ, ತಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಸಂಸದರು ಆಗ್ರಹಿಸಿದರು. ಆದರೆ, ಸ್ವೀಕರ್ ಅದಕ್ಕೆ ಮಣಿಯಲಿಲ್ಲ. ಆದುದರಿಂದ ಸದಸ್ಯರು ಸಭಾ ತ್ಯಾಗ ಮಾಡಿದರು. ಕಾಂಗ್ರೆಸ್, ಡಿಎಂಕೆ, ಎಡರಂಗ ಹಾಗೂ ಆರ್ಎಸ್ಪಿಯ ಸದಸ್ಯರು ಮೊದಲು ಸಭಾ ತ್ಯಾಗ ಮಾಡಿದರು.







