ಯುರೋಪಿಯನ್ ಯೂನಿಯನ್‌ನ ಸಮ್ಮೇಳನದ ಪೋಸ್ಟರ್‌ನಲ್ಲಿ ಮುಸ್ಲಿಮ್ ಮಹಿಳೆಯ ಚಿತ್ರ: ಫ್ರಾನ್ಸ್‌ನ ವಕೀಲರ ಟೀಕೆ

ಪ್ಯಾರಿಸ್, ಫೆ.11: ಯುರೋಪ್‌ನ ಭವಿಷ್ಯ ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರಸಂಕಿರಣದ ಜಾಹೀರಾತಿನಲ್ಲಿ ಹಿಜಾಬ್ ಧರಿಸಿದ ಮುಸ್ಲಿಮ್ ಮಹಿಳೆಯ ಚಿತ್ರ ಬಳಸಿರುವುದಕ್ಕೆ ಫ್ರಾನ್ಸ್‌ನ ವಕೀಲರು ಯುರೋಪಿಯನ್ ಯೂನಿಯನ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಯುರೋಪ್‌ನ ಭವಿಷ್ಯದ ಕುರಿತು ವಿವರಿಸಲು ಮುಸುಕುಧಾರಿ ಮಹಿಳೆಯನ್ನು ಆಯ್ಕೆ ಮಾಡಿಕೊಂಡಿರುವುದು ನನ್ನನ್ನು ಮೂಕವಿಸ್ಮಿತರನ್ನಾಗಿಸಿದೆ. ಮುಸ್ಲಿಂ ಬ್ರದರ್‌ಹುಡ್ ಈ ಕನಸು ಕಾಣುವ ಧೈರ್ಯ ಮಾಡಲಿಲ್ಲ, ಆದರೆ ಕಾರ್ಯಶೀಲ ಮೂರ್ಖರು ಇದನ್ನು ಮಾಡಿದ್ದಾರೆ. ಯುರೋಪ್‌ಗೆ ಇಂತಹ ಭವಿಷ್ಯವನ್ನು ನಿವಾರಿಸಲು ನನ್ನ ಎಲ್ಲಾ ಶಕ್ತಿಮೀರಿ ಹೋರಾಡುತ್ತೇನೆ ಎಂದು ಅಧ್ಯಕ್ಷ ಹುದ್ದೆಯ ಸಂಭಾವ್ಯ ಅಭ್ಯರ್ಥಿ ವಲೆರಿ ಪೆಕ್ರೆಸೆಯ ಸಲಹೆಗಾರ ಥಿಬಾಲ್ಟ್ ಡಿ ಮಾಂಟ್‌ಬ್ರಿಯಲ್ ಹೇಳಿದ್ದಾರೆ.
ಯುರೋಪಿಯನ್ ಯೂನಿಯನ್‌ನ ಕಾರ್ಯನೀತಿ ಮತ್ತು ಸಂಸ್ಥೆಗಳಲ್ಲಿ ಮಾಡಬೇಕಾದ ಸುಧಾರಣೆಯ ಬಗ್ಗೆ ಜನರಿಂದ ಅಭಿಪ್ರಾಯ, ಸಲಹೆ ಸೂಚನೆ ಪಡೆಯುವ ನಿಟ್ಟಿನಲ್ಲಿ ನಡೆಯುವ ವಿಚಾರಸಂಕಿರಣದ ಜಾಹೀರಾತು ಇದಾಗಿದೆ. ಥಿಬಾಲ್ಟ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆ ಯುರೋಪಿಯನ್ ಯೂನಿಯನ್ ವಿಭಾಗದ ಪ್ರತಿನಿಧಿ ಮೆಹ್ರೀನ್ ಖಾನ್, ಪೋಸ್ಟರ್‌ನಲ್ಲಿ ಮುಸ್ಲಿಮ್ ಮಹಿಳೆಯ ಚಿತ್ರವಿದ್ದರೂ, ಮುಸ್ಲಿಮ್ ಬ್ರದರ್‌ಹುಡ್ ಎಂಬ ಪದ ಬಳಸಿರುವುದು ಯುರೋಪಿಯನ್ ಯೂನಿಯನ್ ಇಸ್ಲಾಮ್ ವಿರುದ್ಧ ರಹಸ್ಯ ಪಿತೂರಿ ನಡೆಸುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿದೆ ಎಂದಿದ್ದಾರೆ.
ಯುರೋಪಿಯನ್ ಕಮಿಷನ್(ಯುರೋಪಿಯನ್ ಯೂನಿಯನ್‌ನ ಕಾರ್ಯಕಾರಿ ವಿಭಾಗ) ಮತ್ತು ಮುಸ್ಲಿಮ್ ಭ್ರಾತೃತ್ವದ ಮಧ್ಯೆ ಸಂಪರ್ಕ ಕೊಂಡಿಯಿದೆ ಎಂಬ ಫ್ರಾನ್ಸ್‌ನ ವರದಿಗಾರ ಜೀನ್ ಕ್ವಾರ್ಟ್ರಿಮರ್ ಅವರ ಹೇಳಿಕೆಯನ್ನು ಖಾನ್ ಉಲ್ಲೇಖಿಸಿದ್ದಾರೆ.
ಬ್ರೆಕ್ಸಿಟ್‌ನಿಂದ ಹೊರಹೋಗುವ ಅಭಿಯಾನದ ವರ್ಣಭೇದ ನೀತಿಯ ಬಗ್ಗೆ ವಿಷಾದಿಸಿದ ಎಲ್ಲರಿಗೂ ತಿಳಿಸುವುದೇನೆಂದರೆ, 2022ರಲ್ಲಿ ಯುರೋಪಿಯನ್ ಯೂನಿಯನ್‌ನ ಅತೀ ದೊಡ್ಡ ದೇಶದ ಜವಾಬ್ದಾರಿಯುತ ಮಾಧ್ಯಮ ಯೂನಿಯನ್ ಅನ್ನು ಇಸ್ಲಾಮಿಕ್ ಪಿತೂರಿ ಎಂದು ದೂಷಿಸುತ್ತಿವೆ. ಯಾಕೆಂದರೆ ಯುರೋಪಿಯನ್ ಯೂನಿಯನ್‌ನ ಸಂಗ್ರಹ ಚಿತ್ರದಲ್ಲಿ ಕೆಲವು ಕಂದು ಮಹಿಳೆಯರಿದ್ದಾರೆ ಎಂದು ಖಾನ್ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಫ್ರಾನ್ಸ್‌ನ ಸೆನೆಟ್ ಕ್ರೀಡಾಕೂಟದಲ್ಲಿ ಹಿಜಾಬ್ ನಿಷೇಧಿಸುವ ಪರವಾಗಿ ಮತ ಚಲಾಯಿಸಿದೆ. ದೇಶದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಎಪ್ರಿಲ್‌ನಲ್ಲಿ ಸಾಮಾಜಿಕ ಮಾಧ್ಯಮಗಳ ವರದಿಯು ಎಪ್ರಿಲ್‌ನಲ್ಲಿ ನಡೆಯುವ ಅಧ್ಯಕ್ಷೀಯ ಹುದ್ದೆ ಚುನಾವಣೆಗೂ ಮುನ್ನ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಕಳೆದ ವರ್ಷಎಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ‘ಫ್ರಾನ್ಸ್ ಗಣರಾಜ್ಯದ ತತ್ವಗಳನ್ನು ಬಲಪಡಿಸುವ ಕಾಯ್ದೆ’ ಯು ಮಸೀದಿ, ಶಾಲೆ ಹಾಗೂ ಕ್ರೀಡಾಸಂಸ್ಥೆಗಳ ಮೇಲ್ವಿಚಾರಣೆಯನ್ನು ಬಲಗೊಳಿಸುವ ಉದ್ದೇಶ ಹೊಂದಿದ್ದು ಫ್ರಾನ್ಸ್ ಅನ್ನು ಇಸ್ಲಾಮಿಕ್ ಮೂಲಭೂತ ವಾದದಿಂದ ರಕ್ಷಿಸುವ ಮತ್ತು ಫ್ರಾನ್ಸ್‌ನ ಸಿದ್ಧಾಂತಗಳಿಗೆ ಗೌರವ ದೊರಕಿಸುವ ಪ್ರಯತ್ನ ಇದಾಗಿದೆ ಎಂದು ಸರಕಾರ ಹೇಳಿತ್ತು. ಈ ಕಾಯ್ದೆಯು ಮುಸ್ಲಿಮರನ್ನು ಅನ್ಯಾಯವಾಗಿ ಪ್ರತ್ಯೇಕಿಸುತ್ತದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.







