ಅಮೆರಿಕ ಗಡೀಪಾರು ಮಾಡಿದ ಕ್ಯಾಮರೂನ್ ಪ್ರಜೆಗಳ ವಿರುದ್ಧ ದೌರ್ಜನ್ಯ: ಮಾನವ ಹಕ್ಕು ನಿಗಾ ಸಮಿತಿ ವರದಿ

ವಾಷಿಂಗ್ಟನ್, ಫೆ.11: ಅಮೆರಿಕದಲ್ಲಿ ಆಶ್ರಯ ಕೋರಿ ಬಂದ 80ಕ್ಕೂ ಅಧಿಕ ಕ್ಯಾಮರೂನ್ ಪ್ರಜೆಗಳನ್ನು 2019 ಮತ್ತು 2021ರ ನಡುವೆ ಗಡೀಪಾರು ಮಾಡಲಾಗಿದ್ದು ಅವರು ಸ್ವದೇಶಕ್ಕೆ ಮರಳಿದ ಬಳಿಕ ಚಿತ್ರಹಿಂಸೆ, ಅತ್ಯಾಚಾರ, ಬಲವಂತದ ನಾಪತ್ತೆಯಂತಹ ಗಂಭೀರ ಪ್ರಮಾಣದ ಮಾನವ ಹಕ್ಕು ಉಲ್ಲಂಘನೆಗೆ ಒಳಗಾಗಿದ್ದಾರೆ ಎಂದು ಮಾನವ ಹಕ್ಕು ನಿಗಾ ಸಮಿತಿ ವರದಿ ಮಾಡಿದೆ.
ಗಡೀಪಾರಿಗೆ ಒಳಗಾದವರ ವಿರುದ್ಧ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ದೌರ್ಜನ್ಯ ಮತ್ತು ಕೆಟ್ಟ ವ್ಯವಹಾರದ ಬಗ್ಗೆ ಗುರುವಾರ ಬಿಡುಗಡೆಗೊಳಿಸಿದ 149 ಪುಟಗಳ ವರದಿಯಲ್ಲಿ ನ್ಯೂಯಾರ್ಕ್ ಮೂಲದ ಸಮಿತಿಯು ಮಾಹಿತಿ ನೀಡಿದೆ.
ಕ್ಯಾಮರೂನ್ ನಾಗರಿಕರನ್ನು ಗಡೀಪಾರು ಮಾಡುವ ಮೂಲಕ ಅವರ ವಿಶ್ವಾಸಾರ್ಹ ಆಶ್ರಯ ಕೋರಿಕೆಯನ್ನು ಅಮೆರಿಕದ ಸರಕಾರ ವಿಫಲಗೊಳಿಸಿದ್ದು ಅವರು ಈ ಹಿಂದೆ ತೊಂದರೆಗೆ ಒಳಗಾಗಿ ಓಡಿಬಂದ ದೇಶಕ್ಕೇ ಅವರನ್ನು ಮರಳಿಸಿದೆ. ಅಲ್ಲದೆ, ಈಗಾಗಲೇ ತೀವ್ರ ಆಘಾತಕ್ಕೆ ಒಳಗಾದವರ ವಿರುದ್ಧ ಕೆಟ್ಟದಾಗಿ ನಡೆದುಕೊಂಡಿದೆ. ಈ ನಿಂದನೆಗೆ ಪರಿಹಾರ ಒದಗಿಸಿ, ತಪ್ಪಾಗಿ ಗಡೀಪಾರು ಮಾಡಲಾದ ಕ್ಯಾಮರೂನ್ ಪ್ರಜೆಗಳು ಅಮೆರಿಕಕ್ಕೆ ಮರಳಲು ಮತ್ತು ಆಶ್ರಯ ಕೋರಿ ಮರು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮಾನವ ಹಕ್ಕು ನಿಗಾ ಸಮಿತಿಯ ವಲಸಿಗರು ಮತ್ತು ನಿರಾಶ್ರಿತರ ಹಕ್ಕುಗಳ ಕುರಿತ ಸಂಶೋಧಕ ಲಾರೆನ್ ಸಿಬರ್ಟ್ ಹೇಳಿದ್ದಾರೆ.
ಗಡೀಪಾರು ಮಾಡಲಾದ 41 ಕ್ಯಾಮರೂನ್ ಪ್ರಜೆಗಳು ಹಾಗೂ ಇತರ 54 ಮಂದಿಯನ್ನು ಸಮೀಕ್ಷೆ ನಡೆಸಿ ಈ ವರದಿಯನ್ನು ಸಂಗ್ರಹಿಸಲಾಗಿದ್ದು , ಫೋಟೋ, ವೀಡಿಯೊ ಮತ್ತು ದಾಖಲೆಗಳ ಸಹಿತ ಅಮೆರಿಕದ ವಲಸಿಗರು ಮತ್ತು ಆಶ್ರಯಕ್ಕೆ ಸಂಬಂಧಿಸಿದ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಮಾನವ ಹಕ್ಕು ನಿಗಾ ಸಮಿತಿ ಹೇಳಿದೆ. ಅಂತರಾಷ್ಟ್ರೀಯ ವಲಸಿಗರು ಮತ್ತು ಮಾನವ ಹಕ್ಕು ಕಾಯ್ದೆಯ ಆಧಾರಸ್ಥಂಭವಾದ ಬಲವಂತದ ವಾಪಸಾತಿ ವಿರೋಧಿ ನಿಯಮವನ್ನು ಅಮೆರಿಕದ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಮಾನವ ಹಕ್ಕು ನಿಗಾ ಸಮಿತಿ ಹೇಳಿದೆ. (ಚಿತ್ರಹಿಂಸೆ, ಕ್ರೂರತೆ ಮತ್ತು ಅಮಾನವೀಯ ವರ್ತನೆಗೆ ಒಳಗಾಗುವ ದೇಶಕ್ಕೆ ಯಾವುದೇ ವ್ಯಕ್ತಿಯನ್ನು ಮರಳಿ ಕಳಿಸಬಾರದು ಎಂಬ ನಿಯಮ) .
2016ರಲ್ಲಿ ಕ್ಯಾಮರೂನ್ ನ ವಾಯುವ್ಯ ಮತ್ತು ನೈಋತ್ಯ ಪ್ರಾಂತ್ಯದಲ್ಲಿ ಫ್ರೆಂಚ್ ಮಾತನಾಡುವ ಬಹುಸಂಖ್ಯಾತರಿಂದ ಪ್ರತ್ಯೇಕಗೊಳ್ಳುವ ಉದ್ದೇಶದಿಂದ ಆರಂಭವಾದ ಚಳವಳಿ ಬಳಿಕ ಅಂತರ್ಯುದ್ಧದ ರೂಪಕ್ಕೆ ತಿರುಗಿ ಹಿಂಸಾಚಾರ ಭುಗಿಲೆದ್ದಿತ್ತು. ಅಂದಿನಿಂದ ಪ್ರತ್ಯೇಕತವಾದಿಗಳು ಹಾಗೂ ಸರಕಾರಿ ಪಡೆಗಳ ನಡುವಿನ ಸಂಘರ್ಷದಲ್ಲಿ 3,500ಕ್ಕೂ ಅಧಿಕ ಮಂದಿ ಹತರಾಗಿದ್ದು 7 ಲಕ್ಷಕ್ಕೂ ಅಧಿಕ ಜನತೆ ದೇಶ ಬಿಟ್ಟು ತೆರಳುವ ಪರಿಸ್ಥಿತಿ ಬಂದಿದೆ ಎಂದು ವರದಿಯಾಗಿದೆ.
2020ರ ಅಕ್ಟೋಬರ್‌ನಲ್ಲಿ ತನ್ನನ್ನು ಅಮೆರಿಕದಿಂದ ಕ್ಯಾಮರೂನ್‌ಗೆ ಗಡೀಪಾರು ಮಾಡಿದ ಬಳಿಕ ಅಲ್ಲಿನ ಬಂಧನ ಕೇಂದ್ರದಲ್ಲಿ ಇದ್ದ 6 ವಾರದ ಅವಧಿಯಲ್ಲಿ ಪ್ರತೀ ದಿನ ತನ್ನ ಮೇಲೆ ಅಲ್ಲಿನ ಭದ್ರತಾ ಸಿಬಂದಿ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿರುವುದಾಗಿ ಮಹಿಳೆಯೊಬ್ಬಳು ನೀಡಿರುವ ಹೇಳಿಕೆಯನ್ನು ಮಾನವ ಹಕ್ಕು ನಿಗಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಗಡೀಪಾರಾಗಿ ಬಂದವರನ್ನು ಥಳಿಸುವ ಕ್ಯಾಮರೂನ್ ಅಧಿಕಾರಿಗಳು ‘ಇಲ್ಲಿಂದ ಅಮೆರಿಕಕ್ಕೆ ಪಲಾಯನ ಮಾಡಿ ಅಲ್ಲಿ ನಮ್ಮ ದೇಶದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸರಕಾರದ ಮಾನ ಕಳೆಯುತ್ತಿದ್ದೀರಿ’ ಎಂದು ಚಿತ್ರಹಿಂಸೆ ನೀಡುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ವಲಸೆ ವಿಭಾಗ ಸುಮಾರು 40 ಮಂದಿಯನ್ನು ಒಂದೂವರೆ ವರ್ಷದ ವರೆಗೆ ಅನಗತ್ಯವಾಗಿ ಬಂಧನದಲ್ಲಿರಿಸಿದೆ ಎಂದು ವರದಿ ಹೇಳಿದೆ.
2020 ಮತ್ತು 2021ರಲ್ಲಿ ಕ್ಯಾಮರೂನ್‌ಗೆ ಗಡೀಪಾರು ಮಾಡಲಾದವರನ್ನು ಅಮೆರಿಕಕ್ಕೆ ಮರಳಲು ಅವಕಾಶ ಮಾಡಿಕೊಡುವಂತೆ ಮಾನವ ಹಕ್ಕು ನಿಗಾ ಸಮಿತಿ, ಕ್ಯಾಮರೂನ್‌ನ ವಲಸಿಗರ ಹಕ್ಕು ಹೋರಾಟ ಸಮಿತಿ ಆಗ್ರಹಿಸಿದೆ.







