ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿವೇತನ ಜಮೆ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ

ಬೆಂಗಳೂರು, ಫೆ. 11: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಮೆಟ್ರಿಕ್ ನಂತರ ಪ್ರವೇಶಾತಿ ಪಡೆದು ವಿದ್ಯಾರ್ಥಿ ವೇತನ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದರೆ ಅಂತಹ ವಿದ್ಯಾರ್ಥಿಗಳ ಖಾತೆ ನೇರವಾಗಿ ವಿದ್ಯಾರ್ಥಿ ವೇತನವನ್ನು ಜಮೆ ಮಾಡಲಾಗುವುದು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಶೇ.60 ಹಾಗೂ ರಾಜ್ಯ ಸರಕಾರದಿಂದ ಶೇ. 40ರಷ್ಟು ವಿದ್ಯಾರ್ಥಿ ವೇತನವನ್ನು ಡಿಬಿಟಿ. ಮೂಲಕ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಗೆ ಕೇಂದ್ರ ಸರಕಾರದಿಂದ 16 ಇಲಾಖೆಗಳಿಗೆ 6,392 ಕೋಟಿ ರೂ.ಹಣ ಬಿಡುಗಡೆ ಆಗಿದೆ. 4,519 ಕೋಟಿ ರೂ. ಬಿಡುಗಡೆಯಾಗಿದೆ. 3,984 ಕೋಟಿ ವೆಚ್ಚ ಮಾಡಲಾಗಿದೆ ಎಂದ ಅವರು, ಗಂಗಾ ಕಲ್ಯಾಣದ ಯೋಜನೆಗೆ ಪ್ರಾಮುಖ್ಯತೆ ನೀಡುವಂತೆ ಈಗಾಗಲೇ ತಿಳಿಸಲಾಗಿದೆ. ಈ ಯೋಜನೆ ಅಡಿ ಎಸ್ಸಿ-ಎಸ್ಟಿ ವರ್ಗದ 53 ಸಾವಿರ ಜನರಿಗೆ ಕೊಳವೆ ಬಾವಿ ಮುಖಾಂತರ ನೀರಿನ ಸೌಲಭ್ಯವನ್ನು ನೀಡಲಾಗಿದೆ ಎಂದರು.
ಅದೇ ರೀತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ, ತೋಟಗಾರಿಕೆ, ರೇಶ್ಮೆ ಇಲಾಖೆ, ಅರಣ್ಯ ಮತ್ತು ಕೃಷಿ ಇಲಾಖೆ, ಇಲಾಖೆಗಳಿಂದ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ. ದಲಿತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ವಿಶೇಷವಾದ ಯೋಜನೆಯನ್ನು ರೂಪಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಪ್ಟ ವರ್ಗಗಳ ಜನರ ಆರ್ಥಿಕ ಪ್ರಗತಿ ಸಾಧಿಸಲು 5 ಇಲಾಖೆಗಳು ಒಳಗೊಂಡಂತೆ ಹೆಚ್ಚು ಪ್ರಾಮುಖ್ಯತೆ ನೀಡಲು ನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದರು.







