ನೈಜ ವಿಷಯದಿಂದ ಗೋವಾ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿಯಿಂದ ಯತ್ನ: ರಾಹುಲ್ ಗಾಂಧಿ

ಪಣಜಿ, ಫೆ. 10: ಪರಿಸರ ಹಾಗೂ ಉದ್ಯೋಗದಂತಹ ನೈಜ ಸಮಸ್ಯೆಗಳಿಂದ ಗೋವಾ ಜನರನ್ನು ಗಮನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ಪಂಡಿತ್ ಜವಾಹರ್ಲಾಲ್ ನೆಹರೂ ಅವರು ಬಯಸಿದ್ದರೆ, ಭಾರತ 1947ರಲ್ಲಿ ಸ್ವಾತಂತ್ರ ಪಡೆಯುವ ಸಂದರ್ಭ ಗೋವಾವನ್ನು ವಿಮೋಚನೆಗೊಳಿಸಬಹುದಿತ್ತು ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಟೀಕಿಸಿದ ರಾಹುಲ್ ಗಾಂಧಿ, ಆಗಿನ ಸಂದರ್ಭದ ಪರಿಸ್ಥಿತಿ ಹಾಗೂ ಎರಡನೇ ಮಹಾಯುದ್ದದ ಬಳಿಕ ಏನು ಸಂಭವಿಸಿತು ಎಂಬುದನ್ನು ಪ್ರಧಾನಿ ಅವರು ಅರ್ಥ ಮಾಡಿಕೊಂಡಿಲ್ಲ ಎಂದರು.
ಇಲ್ಲಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಮಾರ್ಗೋವಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಗೋವಾದಲ್ಲಿ ಫೆಬ್ರವರಿ 14ರಂದು ನಡೆಯಿಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಪಡೆಯಲಿದೆ. ಅಲ್ಲದೆ, ಚುನಾವಣೋತ್ತರ ಮೈತ್ರಿಯ ಅಗತ್ಯ ಬೀಳಲಾರದು ಎಂದು ರಾಹುಲ್ ಗಾಂಧಿ ಹೇಳಿದರು. ಜನರು ಕಾಂಗ್ರೆಸ್ಗೆ ನೀಡಿದ ಜನಾದೇಶ ಕದಿಯುವ ಮೂಲಕ ಬಿಜೆಪಿ ಗೋವಾದಲ್ಲಿ ಅಧಿಕಾರಕ್ಕೆ ಬಂತು ಹಾಗೂ 5 ವರ್ಷಗಳ ಕಾಲ ಆಡಳಿತ ನಡೆಸಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಗೋವಾದಲ್ಲಿ ನಮ್ಮ ಸರಕಾರವನ್ನು ಅಸ್ತಿತ್ವಕ್ಕೆ ತರಲು ಕಾಂಗ್ರೆಸ್ ಈಗಿಂದಲೇ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಗಣಿಗಾರಿಕೆಯನ್ನು ಕಾನೂನುಬದ್ದವಾಗಿ ನಡೆಸಲು ಯಾವುದೇ ಸಮಸ್ಯೆ ಇಲ್ಲ. ಕಾನೂನು ಬದ್ದ ಹಾಗೂ ಸುಸ್ಥಿರ ಗಣಿಗಾರಿಕೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲಿದೆ. ನಿಮ್ಮ ಪ್ರವಾಸೋದ್ಯಮ ದೊಡ್ಡ ಸೊತ್ತು. ಪ್ರವಾಸೋದ್ಯಮದ ವಿವಿಧ ಪಾಲುದಾರರೊಂದಿಗೆ ನಾನು ಮಾತನಾಡಿದ್ದೇನೆ. ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸುವ ಯೋಜನೆಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.







