ಕಾಂಗ್ರೆಸ್ ನಾಯಕನ ತಿರುಚಿದ ಫೋಟೊ ಟ್ವೀಟ್: ಬಿಜೆಪಿಗೆ ಚುನಾವಣಾ ಆಯೋಗ ಎಚ್ಚರಿಕೆ

ಹೊಸದಿಲ್ಲಿ, ಫೆ. 10: ಮುಂದಿನ ದಿನಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಹಾಗೂ ಚುನಾವಣಾ ನೀತಿ ಸಂಹಿತೆಯ ನಿಯಮಗಳನ್ನು ಅನುಸರಿಸುವಂತೆ ಉತ್ತರಾಖಂಡ ಬಿಜೆಪಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರ ತಿರುಚಿದ ಚಿತ್ರವನ್ನು ಟ್ವೀಟ್ ಮಾಡಿರುವ ಕುರಿತಂತೆ ಚುನಾವಣಾ ಆಯೋಗ ಬಿಜೆಪಿಯನ್ನು ಎಚ್ಚರಿಸಿದೆ.
ಕಳೆದ ವಾರ ಇದೇ ವಿಷಯಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಬಿಜೆಪಿಗೆ ನೋಟಿಸು ಜಾರಿ ಮಾಡಿತ್ತು. ಉತ್ತರಾಖಂಡ ಬಿಜೆಪಿ ಟ್ವೀಟರ್ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಹರೀಶ್ ರಾವತ್ ಅವರನ್ನು ಮುಸ್ಲಿಂ ಧರ್ಮಗುರುವಂತೆ ತಿರುಚಲಾಗಿತ್ತು. ಮಾದರಿ ನೀತಿ ಸಂಹಿತೆಯ ಯಾವುದೇ ನಿಯಮವನ್ನು ಉಲ್ಲಂಘಿಸುವುದಾಗಲಿ, ಧರ್ಮ, ಜನಾಂಗ, ಜಾತಿ, ಭಾಷೆಯ ನಡುವೆ ಯಾವುದೇ ರೀತಿಯ ಭಿನ್ನತೆ ಸೃಷ್ಟಿಸುವುದಾಗಲಿ ಈ ಟ್ವೀಟ್ನ ಉದ್ದೇಶ ಅಲ್ಲ ಎಂದು ಉತ್ತರಾಖಂಡ ಬಿಜೆಪಿ ತನ್ನ ಪ್ರತಿಪಾದನೆಯಲ್ಲಿ ಹೇಳಿದೆ ಎಂದು ಚುನಾವಣಾ ಆಯೋಗ ಬುಧವಾರ ತನ್ನ ಆದೇಶದಲ್ಲಿ ತಿಳಿಸಿದೆ. ತನ್ನ ಅಧಿಕೃತ ಟ್ವಟರ್ ಹ್ಯಾಂಡಲ್ನಿಂದ ಟ್ವೀಟ್ ಅನ್ನು ಅಳಿಸಲಾಗಿದೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಆದರೆ, ಉತ್ತರಾಖಂಡ ಬಿಜೆಪಿಯ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ





