ಹೆದ್ದಾರಿ ಅಗಲೀಕರಣದಿಂದ ಹಿಮಾಲಯದ ‘ಪಾವಿತ್ರ್ಯತೆʼ ನಾಶ: ಚಾರ್ ಧಾಮ್ ಹೆದ್ದಾರಿ ಯೋಜನೆಯ ವರಿಷ್ಠ ರಾಜೀನಾಮೆ

ಹೊಸದಿಲ್ಲಿ,ಫೆ.11: ಚಾರ್ ಧಾಮ್ ರಸ್ತೆ ವಿಸ್ತರಣಾ ಯೋಜನೆಯ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್ ನಿಯೋಜಿತ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ರವಿಚೋಪ್ರಾ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿಮಾಲಯಗಳ ರಕ್ಷಿಸುವ ಈ ಸಮಿತಿಯು ಒಡೆದು ಚೂರಾಗಿದೆ ಎಂದು ಚೋಪ್ರಾ ಹೇಳಿದರು.
ಉತ್ತರಾಖಂಡದ ಚಾರ್ ಧಾಮ್ ಹೆದ್ದಾರಿ ಯೋಜನೆಯು ಪ್ರಮುಖ ಹಿಂದೂ ಯಾತ್ರಾಸ್ಥಳಗಳಾದ ಗಂಗೋತ್ರಿ, ಯಮುನೋತ್ರಿ,ಕೇದಾರನಾಥ ಹಾಗೂ ಬದರೀನಾಥವನ್ನು ಪರಸ್ಪರ ಸಂಪರ್ಕಿಸುತ್ತವೆ.
2019ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ಚಾರ್ ಧಾಮ್ ಯೋಜನೆಯ ಪರಿಣಾಮವನ್ನು ವಿಶ್ಲೇಷಿಸಲು ಉನ್ನತಾಧಿಕಾರ ಸಮಿತಿಯ ರಚನೆಗೆ ಆದೇಶಿಸಿತ್ತು ಹಾಗೂ ಪರಿಸರದ ಮೇಲಿನ ಹಾನಿಯನ್ನು ಕನಿಷ್ಠಗೊಳಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು.
ಚಾರ್ ಧಾಮ್ ಹೆದ್ದಾರಿ ವಿಸ್ತರಣೆಯ ವಿಷಯದಲ್ಲಿ ಸಮಿತಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವುಂಟಾಗಿತ್ತು. ಆದರೆ 2020ರ ಜುಲೈ 14ರಂದು ಸಮಿತಿಯು ತನ್ನ ಸದಸ್ಯರ ಬಹುಮತದ ಅಭಿಪ್ರಾಯವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಂತಹ ವರದಿಯನ್ನು ಚೋಪ್ರಾ ಅವರ ಮುಂದೆ ಸಲ್ಲಿಸಿತ್ತು. ಚೋಪ್ರಾ ಅವರು ಈ ಅಂತಿಮ ವರದಿಯನ್ನು ಪರಿಸರ ಸಚಿವಾಲಯಕ್ಕೆ ಕಳುಹಿಸಿಕೊಡಬಹುದಾಗಿತ್ತು ಎಂದು ‘ದಿ ಹಿಂದೂ’ ದಿನ ಪತ್ರಿಕೆ ವರದಿ ಮಾಡಿತ್ತು.
ಹೆದ್ದಾರಿಯ ಅಗಲವನ್ನು 5.5 ಮೀಟರ್ ವಿಸ್ತರಿಸಬೇಕೆಂದು ಚೋಪ್ರಾ ಸಲ್ಲಿಸಿದ ವರದಿಯು ಶಿಫಾರಸು ಮಾಡಿತ್ತು. ಆದರೆ ಸಮಿತಿ ಸದಸ್ಯರ ಬಹುಮತದ ವರದಿಯಲ್ಲಿ ಆ ಅಗಲವನ್ನು 12 ಮೀಟರ್ ವಿಸ್ತರಿಸಬಹುದೆಂದು ಸೂಚಿಸಲಾಗಿತ್ತು.
ಡಿಸೆಂಬರ್ 14ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿ ಚಾರ್ ಧಾಮ್ ಯೋಜನೆಯಡಿ 899 ಕಿ.ಮೀ. ವಿಸ್ತೀರ್ಣದ ರಸ್ತೆಗಳನ್ನು ವಿಸ್ತರಿಸಲು ರಕ್ಷಣಾ ಸಚಿವಾಲಯಕ್ಕೆ ಅನುಮತಿ ನೀಡಿತ್ತು. ರಸ್ತೆಗಳ ಅಗಲೀಕರಣವು ಗಡಿ ಹಾಗೂ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ವ್ಯೆಹಾತ್ಮಕವಾಗಿ ಮಹತ್ವಪೂರ್ಣವೆಂದು ತಿಳಿಸಿತ್ತು.
ಸುಪ್ರೀಂಕೋರ್ಟ್ ಆನಂತರ ಹೊರಡಿಸಿದ ಆದೇಶದಲ್ಲಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ಎ.ಕೆ.ಸಿಕ್ರಿ ನೇತೃತ್ವದ ಮೇಲ್ವಿಚಾರಣಾ ಸಮಿತಿಗೆ ಮೂರು ವ್ಯೆಹಾತ್ಮಕ ರಕ್ಷಣಾ ವಲಯದ ರಸ್ತೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಚೋಪ್ರಾ ನೇತೃತ್ವದ ಉನ್ನತಾಧಿಕಾರ ಸಮಿತಿಯ ಅಧಿಕಾರ ವ್ಯಾಪ್ತಿಯು ಎರಡು ರಕ್ಷಣೇತರ ರಸ್ತೆಗಳಿಗೆ ಸೀಮಿತವಾಗಿದೆ.
ಸುಪ್ರೀಂಕೋರ್ಟ್ ನಿಂದ ನೇಮಕಗೊಂಡ ಉನ್ನತಾಧಿಕಾರ ಸಮಿತಿಯ ಪಾತ್ರವನ್ನು ಸೀಮಿತಗೊಳಿಸಿರುವುದು ಅತ್ಯಂತ ನಿರಾಶದಾಯಕವಾದುದಾಗಿದೆ. ರಸ್ತೆಗಳ ಅಗಲೀಕರಣದಿಂದ ಹಿಮಾಲಯ ‘ಅಪವಿತ್ರ’ವಾಗಲಿದೆ ಎಂದು ಚೋಪ್ರಾ ಅವರು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಚಾರ್ ಧಾಮ್ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿ ಈ ಹಿಂದೆ ಸಮಿತಿಯು ಮಾಡಿದ್ದ ಶಿಫಾರಸುಗಳು ಹಾಗೂ ನಿರ್ದೇಶಗಳನ್ನು ಕೂಡಾ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ನಿರ್ಲಕ್ಷಿಸಿತ್ತೆಂದು ಚೋಪ್ರಾ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತಾಧಿಕಾರ ಸಮಿತಿಯ ಮುಖ್ಯಸ್ಥನಾಗಿ ಮುಂದುವರಿಯುವುದರಲ್ಲಿ ಯಾವುದೇ ಉದ್ದೇಶವು ತನಗೆ ಕಂಡುಬರುತ್ತಿಲ್ಲವೆಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.







