ಕ್ರಿಪ್ಟೋ ಆಸ್ತಿಗಳಿಗೆ ತೆರಿಗೆ ವಿಧಿಸುವುದೆಂದರೆ ಅದನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದರ್ಥವಲ್ಲ: ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ (PTI)
ಹೊಸದಿಲ್ಲಿ: ಡಿಜಿಟಲ್ ಆಸ್ತಿಗಳ ಮೇಲಿನ ತೆರಿಗೆಯನ್ನು ಕ್ರಿಪ್ಟೋಕರೆನ್ಸಿಗಳನ್ನು ಕಾನೂನುಬದ್ಧಗೊಳಿಸುವ ಪೂರ್ವಭಾವಿಯಾಗಿ ನೋಡಬಾರದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ 2022-23ರ ಕೇಂದ್ರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವರು, "ನಾನು ಈ ಹಂತದಲ್ಲಿ ಅದನ್ನು ಕಾನೂನುಬದ್ಧಗೊಳಿಸಲು ಅಥವಾ ನಿಷೇಧಿಸಲು ಹೋಗುವುದಿಲ್ಲ. ನಿಷೇಧಿಸುವುದು ಅಥವಾ ನಿಷೇಧಿಸದಿರುವುದರ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ತರುವಾಯ ತೀರ್ಮಾನಿಸಲಾಗುವುದು" ಎಂದು ಹೇಳಿದ್ದಾರೆ.
ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಯ ಮೇಲೆ ಶೇಕಡಾ 1 ರಷ್ಟು ಟಿಡಿಎಸ್ ಅನ್ನು ವಿಧಿಸುವುದಾಗಿ ಸೀತಾರಾಮನ್ ಘೋಷಿಸಿದ್ದಾರೆ.
ಕೆಲವು ಮಾರುಕಟ್ಟೆ ವಿಶ್ಲೇಷಕರು ಮತ್ತು ಆರ್ಥಿಕ ತಜ್ಞರು ಡಿಜಿಟಲ್ ಆಸ್ತಿಗಳ ಮೇಲಿನ ತೆರಿಗೆಗಳನ್ನು ವಿಧಿಸುವುದನ್ನು ಕ್ರಿಪ್ಟೋಕರೆನ್ಸಿಗಳ ಕಾನೂನುಬದ್ಧಗೊಳಿಸುವಿಕೆಯ ಪೂರ್ವಗಾಮಿಯಾಗಿ ವಿಶ್ಲೇಷಿಸಿದ್ದಾರೆ.
ಆದಾಗ್ಯೂ, ಕ್ರಿಪ್ಟೋಕರೆನ್ಸಿಗಳ ವಹಿವಾಟಿನಿಂದ ಬರುವ ಲಾಭದ ಮೇಲೆ ತೆರಿಗೆ ವಿಧಿಸಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ, ಅದರ ನಿಯಂತ್ರಣ ಅಥವಾ ಕಾನೂನುಬದ್ಧತೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದ್ದಾರೆ.







