3ನೇ ಏಕದಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ ಕೊಹ್ಲಿ; ಗಾವಸ್ಕರ್ ಹೇಳಿದ್ದೇನು?
ವಿರಾಟ್ ಕೊಹ್ಲಿ (ಫೋಟೊ - PTI)
ಅಹ್ಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ’ಶೂನ್ಯ ಸಂಪಾದನೆ’ ಮಾಡಿದರೂ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಫಾರ್ಮ್ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಬ್ಯಾಟಿಂಗ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ಕ್ಯಾಪ್ಟನ್ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧದ ಸರಣಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿರುವ ಕೊಹ್ಲಿ ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 8, 18 ಮತ್ತು 0 ರನ್ ಗಳಿಸಿದ್ದರು. ಆದಾಗ್ಯೂ ಭಾರತ ಮೊಟ್ಟಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದೆ.
ಭಾರತದ ತಂಡದ ಮಾಜಿ ನಾಯಕ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ದಾಖಲಿಸಿದ್ದರು. ಆದಾಗ್ಯೂ ಕೊಹ್ಲಿಯವರ ಬ್ಯಾಟಿಂಗ್ ಗುಣಮಟ್ಟ ಹಿಂದೆ ಅತ್ಯುನ್ನತ ಮಟ್ಟದಲ್ಲಿ ಇದ್ದ ಕಾರಣದಿಂದ ಇದೀಗ ಅವರ ಫಾರ್ಮ್ ಬಗೆಗೆ ಮಾತುಗಳು ಕೇಳಿ ಬರುತ್ತಿವೆ.
ಕೊಹ್ಲಿ "ಲೀನ್ ಪ್ಯಾಚ್" ನಡುವೆ ಇರುವ ಸಾಧ್ಯತೆ ಇದ್ದರೂ, ಆತಂಕಪಡುವ ಅಗತ್ಯ ಇಲ್ಲ ಎಂದು ಗಾವಸ್ಕರ್ ಹೇಳಿದರು. ಇದನ್ನು ವಿವಾದ ಮಾಡುವುದು ಬೇಡ. ಯಾವ ಬ್ಯಾಟ್ಸ್ಮನ್ ಕೂಡಾ ಔಟ್ ಆಗಬಹುದು. ಕೊಹ್ಲಿ ಕೂಡಾ ಮನುಷ್ಯ. ಅವರು ಅತ್ಯುನ್ನತ ಗುಣಮಟ್ಟವನ್ನು ಈ ಹಿಂದೆ ಪ್ರದರ್ಶಿಸಿದ್ದರಿಂದ ನಾವು ಇದೀಗ ಈ ಬಗ್ಗೆ ಚರ್ಚಿಸುತ್ತಿದ್ದೇವೆ. ಇಂಥ ಕೆಟ್ಟ ಅವಧಿ ಯಾರಿಗಾದರೂ ಬರಬಹುದು ಎಂದು ಸಮರ್ಥಿಸಿದರು.
"ಕೊಹ್ಲಿ ಬಹುಶಃ ಅಲ್ಪ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಮೊದಲ ಪ್ರಮಾದ ಅಂತಿಮ ಪ್ರಮಾದವಾಗುತ್ತಿದೆ. ಇಂದು ರೋಹಿತ್ ಶರ್ಮಾ ಕೂಡಾ ರನ್ ಗಳಿಸಿಲ್ಲ. ಹಿಂದಿನ ಪಂದ್ಯಗಳಲ್ಲೂ ಅವರು ರನ್ ಗಳಿಸಿರಲಿಲ್ಲ. ಮೊದಲ ಪಂದ್ಯದಲ್ಲಿ 60 ರನ್ ಗಳಿಸಿದ್ದರು. ಆದರೆ ಅವರ ಬಗ್ಗೆ ನಾವು ಮಾತನಾಡುತ್ತಿಲ್ಲ. ವಿರಾಟ್ ಕೊಹ್ಲಿ ನಾಲ್ಕು ಪಂದ್ಯಗಳ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಸತತ ಎರಡು ಬಾರಿ 70ಕ್ಕೂ ಅಧಿಕ ರನ್ ಗಳಿಸಿದ್ದರು ಎಂದು ಗಾವಸ್ಕರ್ ವಿಶ್ಲೇಷಿಸಿದರು.