ಸುದ್ದಿ ಚಾನೆಲ್ ಮುಚ್ಚಲು ರಾಷ್ಟ್ರೀಯ ಭದ್ರತೆಯ ಭೀತಿಯ ಕಾರಣ ನೀಡುವುದು ಅತ್ಯಂತ ಕಳವಳಕಾರಿ ಬೆಳವಣಿಗೆ

ಈ ಪ್ರಕರಣದಲ್ಲಿ ಪ್ರಸಾರ ಎಂದರೆ ಮಾಧ್ಯಮ ಸ್ವಾತಂತ್ರ, ಮಾಹಿತಿಯನ್ನು ಪ್ರಸಾರ ಮಾಡುವ ಸ್ವಾತಂತ್ರ ಮತ್ತು ಮಾಹಿತಿಯನ್ನು ಬಳಸುವ ಸ್ವಾತಂತ್ರವು ಒಳಗೊಂಡಿರುವ ಅಂಶವಾಗಿದೆ. ಇವೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ ಮತ್ತು ವಾಕ್‌ಸ್ವಾತಂತ್ರದ ಚೌಕಟ್ಟಿನ ವ್ಯಾಪ್ತಿಗೆ ಸೇರುತ್ತವೆ. ನ್ಯಾಯಾಲಯವು ಯಾವುದೇ ರೀತಿಯಲ್ಲಿ ಅದರ ಸಮಂಜಸತೆಯನ್ನು ಪರಿಶೀಲಿಸದೆ ಈ ನಿರ್ಬಂಧಗಳನ್ನು ಒಪ್ಪಿಕೊಂಡಂತೆ ಭಾಸವಾಗುತ್ತಿದೆ. ಇದು ಚಾನೆಲ್‌ನ ಪ್ರಸಾರದ ಹಕ್ಕನ್ನು ಮಾತ್ರವಲ್ಲ, ಅದರ ವೀಕ್ಷಕರ ತಿಳಿದುಕೊಳ್ಳುವ ಹಕ್ಕನ್ನೂ ಕಸಿದುಕೊಂಡಂತಾಗಿದೆ.
ಮಲಯಾಳಂ ಸುದ್ದಿಚಾನೆಲ್ ಮೀಡಿಯಾ ಒನ್‌ಗೆ ಪ್ರಸಾರದ ಅನುಮತಿಯನ್ನು ರದ್ದುಗೊಳಿಸುವ ಸರಕಾರದ ಆದೇಶವನ್ನು ಎತ್ತಿಹಿಡಿದಿರುವ ಕೇರಳ ಹೈಕೋರ್ಟ್‌ನ ತೀರ್ಪು ಸ್ಪಷ್ಟವಾಗಿ ತಪ್ಪಾಗಿದೆ. ಕೇಂದ್ರ ಗೃಹ ಇಲಾಖೆಯು ಭದ್ರತಾ ಕ್ಲಿಯರೆನ್ಸ್ ನೀಡಲು ನಿರಾಕರಿಸಿದ ಬಳಿಕ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಾನೆಲ್‌ಗೆ ನೀಡಲಾಗಿದ್ದ ಸಿಗ್ನಲ್‌ಗಳ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಅನುಮತಿಯನ್ನು ನವೀಕರಿಸಿಲ್ಲ. ಈ ಕ್ರಮವನ್ನು ಸಂಸ್ಥೆ ಹಾಗೂ ಕೆಲವು ಉದ್ಯೋಗಿಗಳು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದೊಂದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಪ್ರಾಕೃತಿಕ ನ್ಯಾಯವನ್ನು(ಪಕ್ಷಪಾತಕ್ಕೆ ಅವಕಾಶವಿಲ್ಲದ ನ್ಯಾಯಪ್ರಕ್ರಿಯೆ) ಅವಲೋಕಿಸುವ ಅಗತ್ಯವಿಲ್ಲ ಎಂಬ ಸರಕಾರದ ನಿಲುವನ್ನು ನ್ಯಾಯಾಲಯವೂ ದೃಢಪಡಿಸಿದಂತೆ ಕಾಣುತ್ತದೆ.
ಸಾಕಷ್ಟು ಕಾರಣಗಳಿವೆ ಎಂದು ಸರಕಾರ ಪ್ರತಿಪಾದಿಸಿದ್ದರೂ ಈ ಕಾರಣಗಳನ್ನು ಬಹಿರಂಗಗೊಳಿಸಿಲ್ಲ. ಸೀಲ್ ಮಾಡಲಾದ ಲಕೋಟೆಯಲ್ಲಿ ಸಲ್ಲಿಸಲಾದ ದಾಖಲೆಗಳನ್ನು ಮತ್ತು ಗುಪ್ತಚರ ಮಾಹಿತಿಯನ್ನು ಆಧರಿಸಿ ಭದ್ರತಾ ಕ್ಲಿಯರೆನ್ಸ್‌ಗೆ ನಿರಾಕರಿಸಲಾಗಿದೆ ಎಂಬ ವಾದವನ್ನು (ಅರ್ಜಿದಾರರಿಗೆ ಲಕೋಟೆಯಲ್ಲಿರುವ ವಿಷಯದ ಬಗ್ಗೆ ಮಾಹಿತಿ ನೀಡದೆ) ನ್ಯಾಯಾಲಯ ಸ್ವೀಕರಿಸಿರುವುದು ದುರದೃಷ್ಟಕರವಾಗಿದೆ. ಸಂವಿಧಾನವು ಖಾತರಿಗೊಳಿಸಿದ ಮೂಲಭೂತ ಹಕ್ಕುಗಳ ಮೇಲಿನ ಯಾವುದೇ ನಿರ್ಬಂಧ ಸಮಂಜಸವಾಗಿರಬೇಕು ಮಾತ್ರವಲ್ಲ ಸಮಾನತೆಗೆ ಅನುಗುಣವಾಗಿರಬೇಕು ಎಂಬ ನ್ಯಾಯಶಾಸ್ತ್ರಕ್ಕೆ ಈ ತೀರ್ಪು ವಿರೋಧವಾಗಿದೆ. ಈ ಪ್ರಕರಣದಲ್ಲಿ ಪ್ರಸಾರ ಎಂದರೆ ಮಾಧ್ಯಮ ಸ್ವಾತಂತ್ರ, ಮಾಹಿತಿಯನ್ನು ಪ್ರಸಾರ ಮಾಡುವ ಸ್ವಾತಂತ್ರ ಮತ್ತು ಮಾಹಿತಿಯನ್ನು ಬಳಸುವ ಸ್ವಾತಂತ್ರವು ಒಳಗೊಂಡಿರುವ ಅಂಶವಾಗಿದೆ. ಇವೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ ಮತ್ತು ವಾಕ್‌ಸ್ವಾತಂತ್ರದ ಚೌಕಟ್ಟಿನ ವ್ಯಾಪ್ತಿಗೆ ಸೇರುತ್ತವೆ. ನ್ಯಾಯಾಲಯವು ಯಾವುದೇ ರೀತಿಯಲ್ಲಿ ಅದರ ಸಮಂಜಸತೆಯನ್ನು ಪರಿಶೀಲಿಸದೆ ಈ ನಿರ್ಬಂಧಗಳನ್ನು ಒಪ್ಪಿಕೊಂಡಂತೆ ಭಾಸವಾಗುತ್ತಿದೆ. ಇದು ಚಾನೆಲ್‌ನ ಪ್ರಸಾರದ ಹಕ್ಕನ್ನು ಮಾತ್ರವಲ್ಲ, ಅದರ ವೀಕ್ಷಕರ ತಿಳಿದುಕೊಳ್ಳು ಹಕ್ಕನ್ನೂ ಕಸಿದುಕೊಂಡಂತಾಗಿದೆ.
ರಾಜ್ಯಗಳು ವಿಧಿಸಿರುವ ನಿರ್ಬಂಧಗಳು ನ್ಯಾಯಾಂಗದ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಭದ್ರತೆಯನ್ನು ನೆಪವಾಗಿ ಬಳಸುವಂತಿಲ್ಲ ಎಂದು ಇತ್ತೀಚಿನ ಪ್ರಕರಣದಲ್ಲಿ ಸ್ಥಾಪಿಸಲಾದ ಪೂರ್ವನಿದರ್ಶನವನ್ನು ನ್ಯಾಯಾಲಯ ತಿರಸ್ಕರಿಸಿರುವುದು ಆಶ್ಚರ್ಯಕರವಾಗಿದೆ. ರಾಷ್ಟ್ರೀಯ ಭದ್ರತೆಯ ಭೀತಿಯ ಕಾರಣ ಮುಂದಿಡುವುದು ಸರಕಾರಕ್ಕೆ ನಿರ್ಬಂಧ ಹೇರಲು ನೀಡುವ ಉಚಿತ ಪಾಸ್ ಆಗದು ಎಂದು ಇತ್ತೀಚೆಗೆ ಪೆಗಾಸಸ್ ಪ್ರಕರಣದಲ್ಲಿ ನ್ಯಾಯಾಲಯ ಹೇಳಿತ್ತು. ಪೆಗಾಸಸ್ ಪ್ರಕರಣ ಖಾಸಗಿತನದ ಹಕ್ಕಿನ ಕುರಿತ ಪ್ರಕರಣವಾಗಿರುವುದರಿಂದ ಮೀಡಿಯಾ ಒನ್ ಪ್ರಕರಣಕ್ಕೆ ಅದನ್ನು ಅನ್ವಯಿಸಲಾಗದು ಎಂದು ನ್ಯಾಯಾಧೀಶರು ತಪ್ಪು ಭಾವಿಸಿರಬಹುದು. ಪ್ರಮುಖ ಮೂಲಭೂತ ಹಕ್ಕುಗಳನ್ನು ನಿರಾಕರಿಸಲು ಅಥವಾ ಮೊಟಕುಗೊಳಿಸಲು ರಾಷ್ಟ್ರೀಯ ಭದ್ರತೆಯ ಭೀತಿಯ ಪರಿವೀಕ್ಷಣೆಯ ಅಗತ್ಯದ ವಿರುದ್ಧದ ಅಭಿಪ್ರಾಯವನ್ನು ಮೂಡಿಸಲಾಗಿದೆ. ಅಲ್ಲದೆ, ಸೀಲ್ ಮಾಡಲಾದ ಲಕೋಟೆಯಲ್ಲಿನ ದಾಖಲೆಯನ್ನು ಪರಿಗಣಿಸಿ ನ್ಯಾಯ ಒದಗಿಸುವುದು ಸ್ವೀಕಾರಾರ್ಹವಲ್ಲ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ನ್ಯಾಯಾಲಯದಲ್ಲಿ ಪರಿವೀಕ್ಷಿಸುವ ಅವಕಾಶ ಸೀಮಿತವಾಗಿದೆ ಎಂದು ನ್ಯಾಯಾಲಯಗಳು ಪರಿಗಣಿಸಿದರೂ, ನಿರ್ದಿಷ್ಟ ಕ್ರಮವು ಆ ಆಧಾರಕ್ಕೆ (ರಾಷ್ಟ್ರೀಯ ಭದ್ರತೆಗೆ ಎದುರಾಗುವ ಭೀತಿ) ಅನುಗುಣವಾಗಿದೆ ಎಂದು ಸರಕಾರ ಸಮರ್ಥಿಸಿಕೊಳ್ಳಬೇಕು (ಎಲ್ಲಾ ವಿವರಗಳನ್ನು ಬಹಿರಂಗಗೊಳಿಸಲು ಇಚ್ಛೆಯಿಲ್ಲದಿದ್ದರೆ). ರಹಸ್ಯ ಗುಪ್ತಚರ ವರದಿಯನ್ನು ಆಧರಿಸಿ ಚಾನೆಲ್‌ಗೆ ನೀಡಿದ ಪ್ರಸಾರದ ಹಕ್ಕನ್ನು ರದ್ದುಗೊಳಿಸುವ ಕ್ರಮವನ್ನು ಪ್ರೋತ್ಸಾಹಿಸಿದರೆ ಮಾಧ್ಯಮ ಸ್ವಾತಂತ್ರು ಭಾರೀ ಗಂಡಾಂತರಕ್ಕೆ ಸಿಲುಕಲಿದೆ.
ಕೃಪೆ: ‘ದಿ ಹಿಂದೂ’ ಪತ್ರಿಕೆಯ ಶುಕ್ರವಾರದ ಸಂಪಾದಕೀಯ







