ಐಪಿಎಲ್ ಹರಾಜು: 15.25 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಸೇರಿದ ಇಶಾನ್ ಕಿಶನ್

ಬೆಂಗಳೂರು: ಉದ್ಯಾನನಗರಿಯಲ್ಲಿ ಶನಿವಾರ ಆರಂಭವಾಗಿರುವ 2022ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ 15.25 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಸೇರಿಕೊಂಡರು.
ಇಂದು ಆರಂಭವಾಗಿರುವ ಹರಾಜಿನಲ್ಲಿ ಎಡಗೈ ಬ್ಯಾಟರ್ ಕಿಶನ್ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಹರಾಜಿನ ಆರಂಭಿಕ ಹಂತದಲ್ಲಿ ಶ್ರೇಯಸ್ ಅಯ್ಯರ್ 12.25 ಕೋ.ರೂ.ಗೆ ಹರಾಜಾಗಿದ್ದರು.
ಇದೇ ವೇಳೆ ಭಾರತದ ಬ್ಯಾಟರ್ ಅಂಬಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು. ಬಿಡ್ ವಾರ್ ನಲ್ಲಿ ಚೆನ್ನೈ ತಂಡವು ಸನ್ ರೈಸರ್ಸ್ ತಂಡವನ್ನು ಸೋಲಿಸಿ 6.76 ಕೋ.ರೂ. ನೀಡಿ ರಾಯುಡುರನ್ನು ತನ್ನ ವಶಕ್ಕೆ ಪಡೆದುಕೊಂಡಿತು. ರಾಯುಡು ಮೂಲ ಬೆಲೆ 2 ಕೋ.ರೂ. ಆಗಿತ್ತು.
ಕಳೆದ ಕೆಲವು ವರ್ಷಗಳಿಂದ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6.50 ಕೋ.ರೂ.ಗೆ ಹರಾಜಾದರು. ಮಾರ್ಷ್ 2 ಕೋ.ರೂ. ಮೂಲ ಬೆಲೆ ಹೊಂದಿದ್ದರು.
ಇದೇ ವೇಳೆ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಆರ್ ಸಿಬಿ ಪಾಳಯಕ್ಕೆ 5.50 ಕೋ.ರೂ.ಗೆ ಹರಾಜಾದರು.





