ಫೆ.14ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರಿಗೆ ಆಹ್ವಾನ; ಸ್ಪೀಕರ್ ಕಾಗೇರಿ

ಬೆಂಗಳೂರು, ಫೆ. 12: `ವಿಧಾನ ಮಂಡಲ ಜಂಟಿ ಅಧಿವೇಶನ ಸೋಮವಾರ(ಫೆ.14)ದಿಂದ ಆರಂಭವಾಗಲಿದ್ದು, ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರು ಅಂದು ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ನಾನು ಖುದ್ದು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಆಹ್ವಾನ ನೀಡಿದ್ದೇವೆ. ಇದೇ ಮೊದಲ ಬಾರಿಗೆ ವಿಧಾನಸೌಧದ ಪೂರ್ವದ್ವಾರದಲ್ಲಿನ ವೈಭವೋಪೇತ ಮೆಟ್ಟಿಲುಗಳ ಮೂಲಕ ರಾಜ್ಯಪಾಲರು ಫೆ.14ರಂದು ವಿಧಾನಸಭೆ ಸಭಾಂಗಣಕ್ಕೆ ಆಗಮಿಸಲಿದ್ದಾರೆ' ಎಂದು ಹೇಳಿದರು.
`ಜಂಟಿ ಅಧಿವೇಶನಕ್ಕೆ ಆಗಮಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಅದ್ದೂರಿ ಸ್ವಾಗತ ಕೋರಲು ಪೊಲೀಸ್ ಬ್ಯಾಂಡ್, ಅಶ್ವದಳ ಸಿಬ್ಬಂದಿ, ಮಾರ್ಷಲ್‍ಗಳು ಸನ್ನದ್ಧರಾಗಿದ್ದು, ಅವರಿಗೆ ಕೆಂಪು ಹಾಸಿನ ಸ್ವಾಗತ ಕೋರಲಾಗುವುದು. ರಾಜ್ಯಪಾಲರ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ಕಾಗೇರಿ ತಿಳಿಸಿದರು.
`ಫೆ.14ರಂದು ರಾಜ್ಯಪಾಲರ ಭಾಷಣ ಮಾಡಲಿದ್ದು, ಆ ಬಳಿಕ ಕಾರ್ಯದರ್ಶಿ ವರದಿ ಮಂಡನೆ, ಸಂತಾಪ ಸೂಚನೆ ನಿರ್ಣಯ ಮಂಡನೆ ಮಾಡಲಾಗುವುದು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ, ನಿಗದಿಯಂತೆ ಪ್ರಶ್ನೋತ್ತರ, ಶೂನ್ಯವೇಳೆ, ಗಮನಸೆಳೆಯುವ ಸೂಚನೆ ಸಹಿತ ಇನ್ನಿತರ ಕಲಾಪ ನಡೆಯಲಿದೆ. ಈ ಬಾರಿಯ ಅಧಿವೇಶನಕ್ಕೆ ಸದ್ಯದ ವರೆಗೆ ಎರಡು ವಿಧೇಯಕಗಳು ನನ್ನ ಕಚೇರಿಗೆ ಬಂದಿವೆ' ಎಂದು ಸ್ಪೀಕರ್ ತಿಳಿಸಿದರು.
`ಸದಸ್ಯರಿಂದ ಎರಡೂ ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಬಂದಿವೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸಿ ಅಧಿವೇಶನ ಕಲಾಪ ನಡೆಸಲಾಗುವುದು. ಪ್ರತಿನಿತ್ಯವೂ ವಿಧಾನಸಭೆ ಸಭಾಂಗಣವನ್ನು ಸ್ಯಾನಿಟೈಸ್ ಮಾಡಲಾಗುವುದು. ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ' ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಿಸಿದರು.
ವೀಕ್ಷಕರಿಗೆ ಅವಕಾಶ: ವಿಧಾನ ಮಂಡಲ ಜಂಟಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳಲ್ಲಿ ವಿಧಾನ ಮಂಡಲ ಅಧಿವೇಶನದ ಕಾರ್ಯ-ಕಲಾಪ ವೀಕ್ಷಿಸಲು ಸಾರ್ವಜನಿಕರು ಮತ್ತು ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಅವಕಾಶ ಇರಲಿಲ್ಲ' ಎಂದು ಕಾಗೇರಿ ಮಾಹಿತಿ ನೀಡಿದರು.
ವಿಶೇಷ ಚರ್ಚೆ: ಅಧಿವೇಶನದಲ್ಲಿ `ಚುನಾವಣೆ ವ್ಯವಸ್ಥೆಯ ಸುಧಾರಣೆ' ಬಗ್ಗೆ ವಿಶೇಷ ಚರ್ಚೆಗೆ ತೀರ್ಮಾನ ಮಾಡಿದ್ದೇವೆ. ಯಾವ ದಿನ ಮತ್ತು ಎಷ್ಟು ಸಮಯ ಚರ್ಚೆ ನಡೆಸಬೇಕೆಂಬ ಬಗ್ಗೆ ಸದನ ಕಲಾಪ ಸಲಹಾ ಸಮಿತಿ(ಬಿಎಸ್ಸಿ) ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ಪ್ರತಿಪಕ್ಷಗಳು ಈ ವಿಚಾರಕ್ಕೆ ಸಹಕರಿಸುವ ವಿಶ್ವಾಸವಿದೆ ಎಂದು ಕಾಗೇರಿ ತಿಳಿಸಿದರು.
ಕಾಗದ ರಹಿತ ಕಲ್ಪನೆಗೆ ಚಾಲನೆ: `ಸದನದಲ್ಲಿ ಉತ್ತರಿಸುವ ಚುಕ್ಕೆ ಗುರುತಿನ ಪ್ರಶ್ನೆಗಳು, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಹಾಗೂ ಇತ್ಯಾದಿ ಸೂಚನೆಗಳಿಗೆ ಸರಕಾರ ಒದಗಿಸುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಸದಸ್ಯರಿಗೆ ಹಾಗೂ ಮಾಧ್ಯಮದವರಿಗೆ ಮಿಂಚಂವೆಯ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಚಿವಾಲಯದ ಅಂತರ್ಜಾಲ ತಾಣದಲ್ಲಿಯೂ ಈ ಮಾಹಿತಿ ಲಭ್ಯ' ಎಂದು ಅವರು ತಿಳಿಸಿದರು.







