ಇಡಿ ತನಿಖೆ ಎದುರಿಸುತ್ತಿರುವ ಪತ್ರಕರ್ತೆ ರಾಣಾ ಅಯ್ಯೂಬ್ ಬೆಂಬಲಕ್ಕೆ ನಿಂತ ಐಸಿಎಫ್ಜೆ

ರಾಣಾ ಅಯ್ಯೂಬ್ (Photo: Twitter/@RanaAyyub)
ಹೊಸದಿಲ್ಲಿ: ಸಾಮಾಜಿಕ ಕಾರ್ಯಗಳಿಗೆಂದು ಆನ್ಲೈನ್ ವೇದಿಕೆ ಮೂಲಕ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿದ್ದಾರೆಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ (Rana Ayyub) ಅವರ ಬ್ಯಾಂಕ್ ಖಾತೆಗಳಿಂದ ಹಣ ಮುಟ್ಟುಗೋಲು ಹಾಕಿರುವ ಜತೆಗೆ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ದಾಖಲಿಸಿರುವುದನ್ನು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್(ICFJ) ಖಂಡಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕಟು ಟೀಕಾಕಾರರೆಂದೇ ಗುರುತಿಸಲ್ಪಟ್ಟಿರುವ ರಾಣಾ ಅಯ್ಯೂಬ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಸಂಘಟನೆ "ರಾಣಾ ಅಯ್ಯೂಬ್ ಅವರು ಅಧಿಕಾರಸ್ಥರಿಗೆ ಸಂಬಂಧಿಸಿದಂತೆ ಸತ್ಯ ಹೇಳುವುದನ್ನು ಮುಂದುವರಿಸಿರುವಂತೆಯೇ ಆಕೆಗೆ ಬೆಂಬಲವಾಗಿ ನಾವು ನಿಂತಿದ್ದೇವೆ. ಆಕೆಯ ಜೀವಕ್ಕೆ ಗಂಭೀರ ಬೆದರಿಕೆಗಳಿವೆ. ಭಾರತದಲ್ಲಿ ಸುರಕ್ಷಿತವಾಗಿ ಹಾಗೂ ಮುಕ್ತವಾಗಿ ತನ್ನ ಪತ್ರಿಕೋದ್ಯಮವನ್ನು ಮುಂದುವರಿಸಿಕೊಂಡು ಹೋಗುವ ಆಕೆಯ ಹಕ್ಕನ್ನು ಸಮರ್ಥಿಸಲು ಎಲ್ಲಾ ಸುದ್ದಿ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮುಂದೆ ಬರಬೇಕು,'' ಎಂದು ಹೇಳಿದೆ.
"ಭಾರತ ಸರಕಾರ ಕೂಡ ಆಕೆಯ ಹಕ್ಕುಗಳನ್ನು ರಕ್ಷಿಸಿ ಆಕೆಗೆ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ನೀಡಬೇಕು ಹಾಗೂ ಆಕೆಯ ಸದ್ದಡಗಿಸುವ ಉದ್ದೇಶ ಹೊಂದಿದ ಆಕೆಯ ಮೇಲಿನ ಆನ್ಲೈನ್ ಮತ್ತು ಆಫ್ಲೈನ್ ದಾಳಿಯನ್ನು ಖಂಡಿಸುತ್ತೇವೆ,'' ಎಂದು ಹೇಳಿದೆ.
ಇದನ್ನೂ ಓದಿ: ಹಿಜಾಬ್ ನಿಷೇಧ-ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ: ಹಿಜಾಬ್ ಪ್ರಕರಣದ ಕುರಿತು ಅಮೆರಿಕ







