ಹಿಜಾಬ್ ವಿವಾದ; ಪ್ರಾಂಶುಪಾಲರ ಹೇಳಿಕೆ ಅಚ್ಚರಿದಾಯಕ: ಶಬ್ಬೀರ್ ಅಹ್ಮದ್
ಉಡುಪಿ, ಫೆ.12: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಹೇಳಿಕೆ ಆಶ್ಚರ್ಯಕರವಾಗಿದೆ. ಇದು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿ ಕೊಂಡಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್ ಹೇಳಿದ್ದಾರೆ.
ತಮ್ಮ ಸಂಸ್ಥೆಯಲ್ಲಿ ಕಲೆಯುತ್ತಿರುವ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಬೇಕಿದ್ದ ಪ್ರಾಂಶುಪಾಲರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಮಕ್ಕಳು ಹಿಂದಿನಿಂದಲೂ ಕ್ಲಾಸಿನಲ್ಲಿ ಧರಿಸುತಿದ್ದ ಹಿಜಾಬ್‌ನ್ನು ತಡೆದಿದ್ದೆ ಪ್ರಾಂಶುಪಾಲರು ಎಂದು ವಿದ್ಯಾರ್ಥಿನಿಯರು ಪದೇ ಪದೇ ಹೇಳುತ್ತಿರುವಾಗ, ಸತ್ಯವನ್ನು ಮರೆಮಾಚಿ ದೊಡ್ಡ ರಾದ್ಧಾಂತಕ್ಕೆ ಕಾರಣರಾದವರು ಪ್ರಾಂಶುಪಾಲರು ಎಂದವರು ಹೇಳಿಕೆಯಲ್ಲಿ ದೂರಿದ್ದಾರೆ.
ಶಾಸಕರು ನಿಜವಾಗಿಯೂ ಈ ಘಟನೆಯಿಂದ ನೊಂದುಕೊಂಡಿದ್ದಲ್ಲಿ, ಸಮುದಾಯಗಳ ನಡುವೆ ವಿಷ ಬೀಜ ಭಿತ್ತಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪಿಗೆ ಕೆಟ್ಟ ಹೆಸರು ತರಲು ಮೂಲ ಕಾರಣಕರ್ತರಾದ ಆ ಪ್ರಾಂಶುಪಾಲರನ್ನು, ಎತ್ತಂಗಡಿ ಮಾಡಬೇಕೆಂದು ಅದೇ ಕಾಲೇಜಿನ ಮಾಜಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ ಆದ ಶಬ್ಬೀರ್ ಅಹ್ಮದ್ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.