ಹಿಜಾಬ್ ಧರಿಸುವುದೇ ಅಪರಾಧವೆಂದು ಮಾಧ್ಯಮಗಳು ಬಿಂಬಿಸುತ್ತಿವೆ: ಕವಯತ್ರಿ ಕೆ. ಷರೀಫಾ
ಬೆಂಗಳೂರು, ಫೆ.12: ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಿರುವುದೇ ಅಪರಾಧ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಈ ಯೋಚನೆಯನ್ನು ಮೊದಲು ಬಿಡಬೇಕು ಎಂದು ಕವಯತ್ರಿ ಕೆ. ಷರೀಫಾ ಅಭಿಪ್ರಾಯ ಪಟ್ಟರು.
ಶನಿವಾರ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ಪುರುಷ ಪ್ರಾಧಾನ್ಯತೆಯ ಬಲಿಪಶು ಎಂಬ ವಿಷಯದ ಕುರಿತು ಆಯೋಜಿಸಿದ್ದ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನದ ಮೂರು ಅಲೆಗಳನ್ನು ಯಶಸ್ವಿಯಾಗಿ ಎದುರಿಸಿದ್ದರೂ ಕೇಸರಿ ಶಾಲು ಅಲೆ ಭುಗಿಲೆದ್ದಿದೆ. ಸರಕಾರವು ಕೇಸರಿ ಶಾಲು ಅಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಶಾಲೆಗಳಲ್ಲಿ ಕೇಸರಿ ಶಾಲುಗಳನ್ನು ಹಂಚುವುದನ್ನು ಬಿಟ್ಟು ಪುಸ್ತಕಗಳನ್ನು ಕೊಡಬೇಕಿತ್ತು. ಕೇಸರಿ ಶಾಲು ಹಂಚಿದ್ದರಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ವಿವಾದವನ್ನು ಸೃಷ್ಟಿಸಲಾಗಿದೆ. ಹಿಜಾಬ್ ಧರಿಸುವುದೇ ಅಪರಾಧ ಎಂದು ಬಿಂಬಿಸಲಾಗುತ್ತಿದೆ ಎಂದರು.
ಹಿಂದೂ-ಮುಸ್ಲಿಂ ಗಲಭೆಯಲ್ಲಿ ದಲಿತರು ಹಿಂದುಗಳಾಗುತ್ತಾರೆ. ಗಲಭೆ ಮುಗಿದ ಬಳಿಕ ದಲಿತರು ಅಸ್ಪೃಶ್ಯರಾಗುತ್ತಾರೆ, ವ್ಯವಸ್ಥಿತವಾಗಿ ಅವರನ್ನು ಬೇರ್ಪಡಿಸಲಾಗುವುದು ಎಂಬ ಅಂಬೇಡ್ಕರ್ ಹೇಳಿಕೆಯನ್ನು ಅವರು ನೆನಪಿಸಿಕೊಂಡರು.





