ಹಿಜಾಬ್ ಪ್ರಕರಣ: ನ್ಯಾಯಾಲಯದ ಆದೇಶ ಸರಕಾರ ಪಾಲಿಸುತ್ತದೆ; ಕೆ.ಎಸ್. ಈಶ್ವರಪ್ಪ

ಚಿಕ್ಕಮಗಳೂರು: ಹಿಜಾಬ್, ಕೇಸರಿ ಶಾಲು ವಿಚಾರ ನ್ಯಾಯಾಲಯದಲ್ಲಿದ್ದು, ಕೋರ್ಟ್ ನೀಡುವ ಆದೇಶವನ್ನು ಸರಕಾರ ಪಾಲಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ನ್ಯಾಯಾಲಯದಲ್ಲಿದ್ದು, ಈ ಬಗ್ಗೆ ಹೆಚ್ಚೇನು ಹೇಳುವುದಿಲ್ಲ, ಸರಕಾರ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪರಿಪಾಲಿಸುತ್ತಿದೆ ಎಂದು ತಿಳಿಸಿದರು.
ಉಡುಪಿ ಶಾಸಕ ರಘುಪತಿ ಭಟ್‍ಗೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಹಾಕುವವರು ಹೇಡಿಗಳು, ಹಿಂದೆಯಿಂದ ಗುದ್ದು ಕೊಡುತ್ತಾರೆ. ತಾಕತ್ತಿದ್ದರೆ ಮುಂದೆ ಬರಲಿ, ಇಂತಹ ಹೇಡಿಗಳಿಗೆ ನಾವು ಹೆದರುವುದಿಲ್ಲ, ನಮ್ಮ ದೇಶ ಹೇಡಿಗಳಿಗೆ ಬೆಲೆಕೊಡಲ್ಲ, ಈ ರೀತಿಯ ಬೆದರಿಕೆ ಕರೆಗಳು ನನಗೂ ಬಹಳ ಬಂದಿತ್ತು. ಇದನ್ನೆಲ್ಲ ಎದುರಿಸುತ್ತೇವೆ. ಪೊಲೀಸ್ ಇಲಾಖೆ, ಸಮಾಜ ನಮ್ಮ ಜೊತೆ ಇದೆ. ಆ ಧೈರ್ಯದ ಮೇಲೆ ನಾವು ಮುಂದೆ ಹೋಗುತ್ತಿದ್ದೇವೆ ಎಂದರು.
Next Story





