ಆರ್ ಎಚ್ಎಫ್ಎಲ್, ಅನಿಲ್ ಅಂಬಾನಿ, ಇತರ ಮೂವರಿಗೆ ಶೇರು ಮಾರುಕಟ್ಟೆಯಲ್ಲ್ಲಿ ವ್ಯವಹರಿಸಲು ನಿರ್ಬಂಧ ಹೇರಿದ ಸೆಬಿ

ಹೊಸದಿಲ್ಲಿ, ಫೆ.12: ಕಂಪನಿಯ ಹಣವನ್ನು ದುರುಪಯೋಗಿಸಿಕೊಂಡ ಆರೋಪದಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿ., ಕೈಗಾರಿಕೋದ್ಯಮಿ ಅನಿಲ್ ಅಂಬಾನಿ, ಕಂಪನಿಯ ಕಾರ್ಯಕಾರಿ ನಿರ್ದೇಶಕ ರವೀಂದ್ರ ಸುಧಾಲ್ಕರ್, ಮುಖ್ಯ ಹಣಕಾಸು ಅಧಿಕಾರಿಗಳಾದ ಅಮಿತ್ ಬಾಪ್ನಾ ಮತ್ತು ಪಿಂಕೇಶ್ ಆರ್.ಶಾ ಅವರು ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವುದನ್ನು ಸೆಬಿ ಶುಕ್ರವಾರ ನಿರ್ಬಂಧಿಸಿದೆ.
ಈ ವ್ಯಕ್ತಿಗಳು ಸೆಬಿಯೊಂದಿಗೆ ನೋಂದಣಿಯನ್ನು ಹೊಂದಿರುವ ಯಾವುದೇ ಮಧ್ಯವರ್ತಿ,ಲಿಸ್ಟ್ ಆಗಿರುವ ಯಾವುದೇ ಪಬ್ಲಿಕ್ ಕಂಪನಿಯೊಂದಿಗೆ ಗುರುತಿಸಿಕೊಳ್ಳುವುದನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು ಉದ್ದೇಶಿಸಿರುವ ಯಾವುದೇ ಪಬ್ಲಿಕ್ ಲಿಮಿಟೆಡ್ ಕಂಪನಿಯ ನಿರ್ದೇಶಕರು ಅಥವಾ ಪ್ರವರ್ತಕರಾಗಿ ಕಾರ್ಯ ನಿರ್ವಹಿಸುವುದನ್ನೂ ಸೆಬಿ ಮುಂದಿನ ಆದೇಶದವರೆಗೆ ನಿರ್ಬಂಧಿಸಿದೆ.
ಕಂಪನಿಯ ಹಣವನ್ನು ದುರುಪಯೋಗಿಸಿಕೊಂಡ ಆರೋಪಕ್ಕೆ ಸಂಬಂಧಿಸಿದ ಈ ಆದೇಶವನ್ನು ಒಟ್ಟು 28 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಹೊರಡಿಸಲಾಗಿದೆ.
2018-19ನೇ ಸಾಲಿನಲ್ಲಿ ಸಾಲಗಳನ್ನು ಪಡೆದಿದ್ದ ಹಲವಾರು ಸಂಸ್ಥೆಗಳಿಗೆ ಆರ್ಎಚ್ಎಫ್ಎಲ್ ಸಾಲವನ್ನು ವಿತರಿಸಿದ್ದ ರೀತಿಯ ವಿಸ್ತೃತ ಪರಿಶೀಲನೆ ಸೆಬಿ ತನಿಖೆಯ ಕೇಂದ್ರಬಿಂದುವಾಗಿತ್ತು. ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪ್ರೈಸ್ ವಾಟರ್ಹೌಸ್ ಆ್ಯಂಡ್ ಕಂಪನಿಯು ಆರ್ಎಚ್ಎಫ್ಎಲ್ಗೆ ಬರೆದಿದ್ದ ಪತ್ರ ಮತ್ತು ಪ್ರವರ್ತಕರು ಹಾಗೂ ಹಿರಿಯ ಆಡಳಿತಾತ್ಮಕ ಅಧಿಕಾರಿಗಳು ಕಂಪನಿಯ ಹಣವನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ತಾನು ಸ್ವೀಕರಿಸಿದ್ದ ಹಲವಾರು ದೂರುಗಳ ಆಧಾರದಲ್ಲಿ ಈ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೆಬಿ ತಿಳಿಸಿದೆ.
ವಿವಿಧ ಬ್ಯಾಂಕುಗಳಿಂದ ಸಾಲವಾಗಿ ಪಡೆದುಕೊಂಡಿದ್ದ ಹಣವನ್ನು ಆರ್ಎಚ್ಎಫ್ಎಲ್ ಭಾಗಶಃ ಇತರ ಸಾಲ ಮರುಪಾವತಿಗೆ ಬಳಸಿಕೊಂಡಿದೆ ಎಂದು ಬ್ಯಾಂಕುಗಳೂ ಆರೋಪಿಸಿದ್ದವು. ಆರ್ಎಚ್ಎಫ್ಎಲ್ನಿಂದ ಪ್ರವರ್ತಕ ಕಂಪನಿ ರಿಲಯನ್ಸ್ ಕ್ಯಾಪಿಟಲ್ಗೆ ಸಂಬಂಧಿತ ಸಂಸ್ಥೆಗಳಿಗೆ ಅಕ್ರಮವಾಗಿ ಹಣವನ್ನು
ವರ್ಗಾಯಿಸಲು ದುರ್ಬಲ ಆರ್ಥಿಕತೆಯ ವಿವಿಧ ಸಂಬಂಧಿತ ವ್ಯಕ್ತಿಗಳು ಮತ್ತು ಕಂಪನಿಗಳನ್ನು ಬಳಸಿಕೊಳ್ಳಲಾಗಿತ್ತು ಎಂದೂ ದೂರಲಾಗಿತ್ತು. ಸುಧಾಲ್ಕರ್,ಬಾಪ್ನಾ ಮತ್ತು ಶಾ ಇಂತಹ ಅಕ್ರಮಗಳನ್ನು ನಿರ್ದೇಶಕರ ಮಂಡಳಿ/ನಿಯಂತ್ರಕರ ಗಮನಕ್ಕೆ ತರುವ ಬದಲು ಅನಿಲ್ ಅಂಬಾನಿ ಜೊತೆ ಶಾಮೀಲಾಗಿದ್ದರು ಎಂದು ಸೆಬಿ ತನ್ನ ಮಧ್ಯಂತರ ಆದೇಶದಲ್ಲಿ ಬೆಟ್ಟು ಮಾಡಿದೆ.
ಸಾಮಾನ್ಯ ಉದ್ದೇಶಗಳ ಕಾರ್ಪೊರೇಟ್ ಸಾಲಗಳಡಿ ಆರ್ಎಚ್ಎಫ್ಎಲ್ ವಿತರಿಸಿದ್ದ ಸಾಲಗಳ ಮೊತ್ತ 2018,ಮಾ.31 ರಂದು ಸುಮಾರು 900 ಕೋ.ರೂ.ಇದ್ದರೆ 2019,ಮಾ.31ಕ್ಕೆ ಅದು ಸುಮಾರು 7,900 ಕೋ.ರೂ.ಗೇರಿತ್ತು ಎಂದು ಆದೇಶದಲ್ಲಿ ಹೇಳಲಾಗಿದೆ.
ಆರ್ಎಚ್ಎಫ್ಎಲ್ ಮೇಲೆ ಹೇರಲಾಗಿರುವ ನಿರ್ಬಂಧವು ಯಾವುದೇ ಕಾನೂನಿನಲ್ಲಿ ಅನುಮೋದಿಸಲಾದ ಅಥವಾ ಅನುಮೋದಿಸಬೇಕಿರುವ ಯಾವುದೇ ನಿರ್ಣಯ,ಪುನರುಜ್ಜೀವನ ಯೋಜನೆಗೆ ಅಡ್ಡಿಯಾಗುವುದಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ.







