ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪನಾ ದಿನಾಚರಣೆ

ಮಂಗಳೂರು : ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಶಂಕುಸ್ಥಾಪನೆಯ ಇಪ್ಪತ್ತೊಂದನೇ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜು ತನ್ನ ವಾರ್ಷಿಕ ಸಂಸ್ಥಾಪನಾ ದಿನದ ಉಪನ್ಯಾಸವನ್ನು 11 ಫೆಬ್ರವರಿ ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ಕಲಾಂ ಸಭಾಂಗಣದಲ್ಲಿ ಆಯೋಜಿಸಿತು.
ಮಂಗಳೂರಿನ ಬಿಷಪ್ ಮತ್ತು ಕಾಲೇಜಿನ ಅಧ್ಯಕ್ಷರಾದ ಅತಿ ವಂ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು `ವಿದ್ಯಾರ್ಥಿಗಳ ಜೊತೆಯಲ್ಲಿ' ಎಂಬ ವಿಷಯದ ಕುರಿತು ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದರು.
ತಮ್ಮ ಉಪನ್ಯಾಸದಲ್ಲಿ, ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕಾಲೇಜನ್ನು ಪ್ರಧಾನ ಸಂಸ್ಥೆಯಾಗಿ ಮಾಡಲು ಶ್ರಮಿಸಿದ ಎಲ್ಲರನ್ನೂ ನೆನಪಿಸಿಕೊಂಡರು. ಸಾಂಸ್ಥಿಕ ಸ್ವಾಯತ್ತತೆಯೊಂದಿಗೆ ನ್ಯಾಕ್ ಮತ್ತು ಎನ್‍ಬಿಎಯಿಂದ ಮಾನ್ಯತೆ ಪಡೆದ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅವರು ಅಭಿನಂದಿಸಿದರು. ಹೆಚ್ಚಿನ ಮಟ್ಟದ ಶ್ರೇಷ್ಠತೆಗಾಗಿ ಶ್ರಮಿಸುವಂತೆ ಅವರು ಕಾಲೇಜಿನ ಎಲ್ಲಾ ಸದಸ್ಯರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಅವರು ಕಣ್ಣುಗಳಿಂದ ಆಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, ಕೇಳುವಿಕೆಯು ಒಂದು ರೀತಿಯ ಸಂವಹನವಾಗಿದ್ದು ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯ ಅಗತ್ಯವಿರುತ್ತದೆ ಎಂದರು. ಮುಂದುವರಿದು ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳ ಮಾತುಗಳನ್ನು ಆಲಿಸುವ ಮೂಲಕ ಅವರಲ್ಲಿನ ಉತ್ಕ್ರಷ್ಟತೆಯನ್ನು ಹೊರತರಬಹುದು ಎಂದರು. ಅವರು ಶಿಕ್ಷಕರಿಗೆ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿರಲು ಕರೆ ನೀಡಿದರು. ಶಿಕ್ಷಕರು ಕೇವಲ ಕಲ್ಪನೆಗಳು ಮತ್ತು ಕೌಶಲ್ಯಗಳನ್ನು ನೀಡದೆ ವಿದ್ಯಾರ್ಥಿಗಳು ಆಧ್ಯಾತ್ಮಿಕ ಘನತೆಯನ್ನು ಅನುಭವಿಸುವಂತೆ ಮಾಡಬೇಕು ಎಂದು ಬಿಷಪ್ ಅಭಿಪ್ರಾಯಪಟ್ಟರು. ಮೌಲ್ಯ ವ್ಯವಸ್ಥೆಯೊಂದಿಗಿನ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ಅಬ್ದುಲ್ ಕಲಾಂ ಅವರು ಶಿಕ್ಷಕರಿಗೆ ನೀಡಿದ 11 ಅಂಶಗಳ ಪ್ರಮಾಣ ವಚನವನ್ನು ಉಲ್ಲೇಖಿಸಿದ ಅವರು ಇದು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ನಿರ್ದೇಶಕರಾದ ವಂ ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜಾ, ಸಹಾಯಕ ನಿರ್ದೇಶಕರಾದ ವಂ ಆಲ್ವಿನ್ ರಿಚರ್ಡ್ ಡಿ'ಸೋಜಾ, ಪ್ರಾಂಶುಪಾಲರಾದ ಡಾ ರಿಯೋ ಡಿ'ಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ ಅವರು ಉಪಸ್ಥಿತರಿದ್ದರು.
ಕಾಲೇಜಿನ ಶೈಕ್ಷಣಿಕ ಡೀನ್ ಡಾ ವಿನ್ಸೆಂಟ್ ಕ್ರಾಸ್ತಾ ಉಪನ್ಯಾಸದ ಮಾಡರೇಟರ್ ಆಗಿ ಕಾರ್ಯನಿರ್ವಹಿಸಿದರು. ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೈತ್ರ ಶೆಟ್ಟಿ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಮ್ಯಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಸ್ಥೆಯ 21ನೇ ಸಂಸ್ಥಾಪನಾ ದಿನಾಚರಣೆಯನ್ನು ಗುರುತಿಸಲು, ಬಿಷಪ್ ಅವರು ಇತರ ಗಣ್ಯರ ಸಮ್ಮುಖದಲ್ಲಿ ಕ್ಯಾಂಪಸ್‍ನಲ್ಲಿ ಸಸಿ ನೆಟ್ಟರು.
ಕಾಲೇಜು ತನ್ನ ಅಸ್ತಿತ್ವದ ಹೊಸ ದಶಕಕ್ಕೆ ಪ್ರವೇಶಿಸುತ್ತಿರುವಂತೆ, ಸಂಸ್ಥೆಯು ಇನ್ನೋವೇಶನ್ ಸೆಂಟರ್ ರೂಪದಲ್ಲಿ ಹೊಸ ಮೂಲಸೌಕರ್ಯ ಸಂಕೀರ್ಣದ ನಿರ್ಮಾಣವನ್ನು ಘೋಷಿಸಿತು. ಈ ಕೇಂದ್ರವು ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಸಮುದಾಯ ತೊಡಗಿಸಿಕೊಳ್ಳುವಿಕೆ, ಇನ್ಕ್ಯುಬೇಷನ್ ಮತ್ತು ಸ್ಟಾರ್ಟ್‍ಅಪ್‍ಗಳು ಹಾಗೂ ಸಂಸ್ಥೆಯ ಉದ್ಯಮಶೀಲತಾ ಚಟುವಟಿಕೆಗಳಿಗೆ ವೇಗವನ್ನು ನೀಡಲಿದೆ. ಈ ಅದ್ಭುತ ಸೌಲಭ್ಯವನ್ನು ಸ್ಥಾಪಿಸುವ ಮೊದಲ ಹೆಜ್ಜೆಯಾಗಿ, ಬಿಷಪ್ ಅವರು ಈ ಸಂದರ್ಭದಲ್ಲಿ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿ ಆಶೀರ್ವದಿಸಿದರು.







