ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುದಕ್ಕೆ ಮನೆಯಲ್ಲಿ ವಾಗ್ವಾದ: 15 ವರ್ಷದ ಬಾಲಕನಿಂದ ಹೆತ್ತವರು, ಸೋದರನ ಹತ್ಯೆ

ಮ್ಯಾಡ್ರಿಡ್, ಫೆ.12: ಶಾಲಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ವಾಗ್ವಾದ ಉಂಟಾದ ಬಳಿಕ ಹದಿನೈದು ವರ್ಷದ ಬಾಲಕನೊಬ್ಬ ತನ್ನ ಪಾಲಕರನ್ನು ಹಾಗೂ 10 ವರ್ಷ ಪ್ರಾಯದ ಸಹೋದರನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಸ್ಪೇನ್ನಲ್ಲಿ ವರದಿಯಾಗಿದೆ.
ಆಗ್ನೇಯ ಸ್ಪೇನ್ನ ಬಂದರುನಗರವಾದ ಅಲಿಕಾಂಟೆಯಿಂದ 20 ಕಿ.ಮೀ. ದೂರದ ಎಲ್ಶೆ ಪಟ್ಟಣದ ಹೊರಗಿರುವ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹಂತಕ ಬಾಲಕನ ತಾಯಿಯ ಸೋದರಿ ಮನೆಗೆ ಭೇಟಿಗೆಂದು ಆಗಮಿಸಿದ ಬಳಿಕವಷ್ಟೇ ಈ ಬರ್ಬರ ಘಟನೆ ಬೆಳಕಿಗೆ ಬಂದಿತ್ತು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಆಗ ಈ ಬಾಲಕನು ತಾನು ತಂದೆ, ತಾಯಿ ಹಾಗೂ ಸೋದರನನ್ನು ಹತ್ಯೆಗೈದಿರುವುದಾಗಿ ಆಕೆಗೆ ತಿಳಿಸಿದನೆಂದು ಪೊಲೀಸರು ಹೇಳಿದ್ದಾರೆ.
15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನು ಮೂರು ದಿನಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ಮೃತದೇಹಗಳ ಜೊತೆಗಿದ್ದನೆಂದು ಪೊಲೀಸರು ಹೇಳಿದ್ದಾರೆ. ಆತನನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ತನ್ನ ಶಾಲಾ ಅಂಕಗಳಿಗೆ ಸಂಬಂಧಿಸಿ ಬಾಲಕನು ತಾಯಿ ಜೊತೆ ಜಗಳವಾಡಿದ್ದ. ಆನಂತರ ಆತ ತಂದೆ ಶಿಕಾರಿ ರೈಫಲ್ನಿಂದ ಆಕೆಯನ್ನು , ತನ್ನ 10 ವರ್ಷದ ಸೋದರನನ್ನು ಮತ್ತು ತಂದೆಯನ್ನು ಹತ್ಯೆಗೈದನೆಂದು ಪೊಲೀಸರು ತಿಳಿಸಿದ್ದಾರೆ.





