ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಮರುಸ್ಥಾಪಿಸುವಂತೆ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕದಿಂದ ಮನವಿ

ಭಟ್ಕಳ: ಸರ್ವಧರ್ಮದ ಶಾಂತಿಯ ತೋಟದಂತಿರುವ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಉಡುಪಿಯಿಂದ ಪ್ರಾರಂಭ ವಾದ ಹಿಜಾಬ್ ವಿವಾದ ಈಗ ಕರ್ನಾಟಕದ ಹಲವಾರು ಸ್ಥಳಗಳಿಗೆ ಹರಡಿಕೊಂಡಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಾಣಗೊಂಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಸ್ಥಾಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಅದ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಮುಕ್ತವಾದ ವಾತವರಣ ನಿರ್ಮಾಣ ಮಾಡಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತಂತೆ ಶನಿವಾರ ಭಟ್ಕಳ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ರಾಜ್ಯಾದಾದ್ಯಂತ ವಿದ್ಯಾರ್ಥಿ ಸಮುದಾಯಗಳ ನಡುವೆ ಎದ್ದಿರುವ ಅಪಸ್ಥರ ಹಾಗೂ ಅವುಗಳಿಂದ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ರಾಜ್ಯದ ಶಿಕ್ಷಣ ಸಂಸ್ಥೆಗಳ ಅಶಾಂತಿ ಬಗ್ಗೆ ನಾವು ತೀವ್ರವಾದ ವೇದನೆಯನ್ನು ವ್ಯಕ್ತಪಡಿಸುತ್ತೇವೆ. ಈ ವಿವಾದವು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಮಾತ್ರವಲ್ಲದೆ ಸಂಸತ್ತಿನಲ್ಲೂ ಚರ್ಚೆಯಾಗುತ್ತಿದೆ. ದುರದೃಷ್ಟವಶಾತ್, ಈ ವಿವಾದವು ಕೆಲವು ಸ್ಥಾಪಿತ ಹಿತಾಸಕ್ತಿಗಳಿಂದ ರಾಜಕೀಯಗೊಂಡಿದೆ ಮತ್ತು ಅದರ ಫಲಿತಾಂಶವಾಗಿ ಕೆಲವರ ಹಿಂಸಾಚಾರ ಹಾಗೂ ಅಹಿತಕರ ಘಟನೆಗಳಿಗೆ ಕಾರಣವಾಗಿದೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗುತ್ತಿರುವುದು ಅತ್ಯಂತ ಗಂಭೀರವಾಗಿದೆ ಎಂದು ಮನವಿಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ.
ಹಿಜಾಬ್ ವಿವಾದದ ಕುರಿತಂತೆ ನಾವು ನಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇವೆ. ಅತ್ಯಂತ ಭಾವನಾತ್ಮಕ ಮತ್ತು ಧಾರ್ಮಿಕ ವಿಷಯವಾದ ಇದರ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳುವಂತೆ, ಅಲ್ಪಸಂಖ್ಯಾತರಲ್ಲಿ ವಿಶ್ವಾಸ ತುಂಬುವಂತೆ ಮತ್ತು ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯನ್ನು ಎತ್ತಿಹಿಡಿಯುವಂತೆ ಸರ್ಕಾರವನ್ನು ನಾವು ವಿನಂತಿಸುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪಾ, ಯೂನೂಸ್ ರುಕ್ನುದ್ದೀನ್, ಮೌಲಾನ ಸೈಯ್ಯದ್ ಝುಬೇರ್, ಶೌಕತ್ ಕತೀಬ್, ಆಸಿಫ್ ಶೇಖ್ ಸೇರಿದಂತೆ ಮಹಿಳಾ ವಿಭಾಗದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.