ಮುಟ್ಟುಗೋಲು ಹಾಕಿದ ಅಫ್ಘಾನ್ ಸಂಪತ್ತಿನ ಅರ್ಧಾಂಶ ಹಣ 9/11 ಸಂತ್ರಸ್ತರಿಗೆ ಬಿಡುಗಡೆ: ಬೈಡನ್ ಆದೇಶ
ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ

ವಾಶಿಂಗ್ಟನ್, ಫೆ.12: ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಿಂದ ಮುಟ್ಟುಗೋಲು ಹಾಕಲಾಗಿದ್ದ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ ನ 7 ಶತಕೋಟಿ ಡಾಲರ್ ಸಂಪತ್ತನ್ನು ಬಿಡುಗಡೆಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಸಹಿಹಾಕಿದ್ದಾರೆ.
ಬಿಡುಗಡೆಗೊಳಿಸಲಾದ ಹಣದ ಅರ್ಧಾಂಶವನ್ನು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಮಾನವೀಯ ನೆರವಿನ ಕಾರ್ಯಗಳಿಗೆ ನೀಡಲಾಗುವುದು ಹಾಗೂ ಉಳಿದ ಆರ್ಧಾಂಶವನ್ನು ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪರಿಹಾರವನ್ನು ನೀಡಲು ಟ್ರಸ್ಟ್ ನಿಧಿಯೊಂದನ್ನು ಸ್ಥಾಪಿಸಲು ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಆದರೆ ಈ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಲಾಗುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಪರಿಹಾರ ಹಾಗೂ ಮೂಲಭೂತ ಅವಶ್ಯಕತೆಗಳಿಗಾಗಿ ನೀಡಲಾಗುವ 3.5 ಶತಕೋಟಿ ಡಾಲರ್ ಹಣವನ್ನು ಮಂಜೂರು ಮಾಡುವುದಕ್ಕೆ ಅಮೆರಿಕದ ಆರ್ಥಿಕ ಸಂಸ್ಥೆಗಳಿಗೆ ಪ್ರತ್ಯೇಕ ಆದೇಶವೊಂದನ್ನು ಜಾರಿಗೊಳಿಸಬೇಕಾಗುತ್ತದೆ. ಉಳಿದ 3.5 ಶತಕೋಟಿ ಡಾಲರ್ ಹಣವು ಅಮೆರಿಕದಲ್ಲಿಯೇ ಉಳಿಯಲಿದೆ ಹಾಗೂ ಅದನ್ನು ಭಯೋತ್ಪಾದನೆಯಿಂದ ಸಂತ್ರಸ್ತರಾದ ಅಮೆರಿಕನ್ನರು ನಡೆಸುತ್ತಿರುವ ಕಾನೂನು ಸಮರದಲ್ಲಿ ಪರಿಹಾರವಾಗಿ ನೀಡಲು ಬಳಸಲಾಗುವುದು ಎಂದವರು ಹೇಳಿದರು.
ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿಕೆಯೊಂದನ್ನು ನೀಡಿದ್ದು, ಅಫ್ಘಾನಿಸ್ತಾನದ ಜನತೆ ಅಗಾಧವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಭೀಕರವಾದ ಬರಗಾಲ, ಕೋವಿಡ್19 ಹಾಗೂ ವ್ಯಾಪಕವಾದ ಭ್ರಷ್ಟಾಚಾರದ ಪಿಡುಗು ಮತ್ತು ಹಲವಾರು ದಶಕಗಳಿಂದ ಅಂತಾರಾಷ್ಟ್ರೀಯ ನೆರವನ್ನೇ ಅವಲಂಭಿಸಿದ್ದ ಪರಿಣಾಮವಾಗಿ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ಗೆ ಸೇರಿದ 3.5 ಶತಕೋಟಿ ಡಾಲರ್ ಸಂಪತ್ತನ್ನು ಅಫ್ಘಾನ್ ಜನತೆಯ ಪ್ರಯೋಜನಕ್ಕಾಗಿ ಬಳಸುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಬೈಡೆನ್ ಸಹಿಹಾಕಿದ್ದಾರೆಂದು ತಿಳಿಸಿದ್ದಾರೆ.
‘‘ಇದರ ಜೊತೆಗೆ ಸೆಪ್ಟೆಂಬರ್ 11,2001ರ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರಾದವರು ,ಸೆಂಟ್ರಲ್ ಬ್ಯಾಂಕ್ ನ ಉಳಿದ ಸಂಪತ್ತಿಗೆ ಸಂಬಂಧಿಸಿ ತಾಲಿಬಾನ್ ವಿರುದ್ಧ ಫೆಡರಲ್ ನ್ಯಾಯಾಲಯದಲ್ಲಿ ಹೂಡಿರುವ ದಾವೆಗಳನ್ನು ಕೂಡಾ ನಾವು ಮಾನ್ಯ ಮಾಡುತ್ತೇವೆ ಎಂದವರು ಹೇಳಿದ್ದಾರೆ.
ಎರಡು ದಶಕಗಳ ಕಾಲ ಜೊತೆಯಾಗಿ ಕೆಲಸ ಮಾಡುವ ಮೂಲಕ ನಿರ್ಮಾಣವಾಗಿರುವ ಅಫ್ಘಾನಿಸ್ತಾನದ ಜೊತೆಗೆ ಅಮೆರಿದ ಬಾಂಧವ್ಯಗಳು ಸ್ಥಿರವಾಗಿ ಹಾಗೂ ಧಾರಣಾಶೀಲವಾಗಿದೆಯೆಂದು ಬ್ಲಿಂಕೆನ್ ಹೇಳಿದ್ದಾರೆ.
ಅಫ್ಘಾನ್ ಸೆಂಟ್ರಲ್ ಬ್ಯಾಂಕ್ನ ಸಂಪತ್ತಿನಲ್ಲಿ 3.5 ಶತಕೋಟಿ ಡಾಲರ್ ಹಣವನ್ನು 9/11 ಸಂತ್ರಸ್ತರಿಗೆ ನೀಡುವ ಬೈಡೆನ್ ಆದೇಶವು, ‘ಕಳ್ಳತನ’ವೆಂದು ತಾಲಿಬಾನ್ ಸರಕಾರದ ವಕ್ತಾರರೊಬ್ಬರು ಖಂಡಿಸಿದ್ದಾರೆ.
► ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ
ಅಮೆರಿಕದಲ್ಲಿ ಸ್ತಂಭನಗೊಳಿಸಲಾಗಿರುವ ಅಫ್ಘಾನಿಸ್ತಾನದ ಸಂಪತ್ತಿನಲ್ಲಿ 3.5 ಶತಕೋಟಿ ಡಾಲರ್ಗಳನ್ನು 9/11 ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ನೀಡುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶದ ವಿರುದ್ಧ ಕಾಬೂಲ್ನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಕಾಬೂಲ್ ನ ಪ್ರಧಾನ ಈದ್ಗಾ ಮಸೀದಿಯ ಹೊರಭಾಗದಲ್ಲಿ ಜಮಾಯಿಸಿದ ಪ್ರತಿಭಟನಕಾರರು, 20 ವರ್ಷಗಳ ಅಫ್ಘಾನ್ ಸಮರದಲ್ಲಿ ಸಾವನ್ನಪ್ಪಿದ ಸಾವಿರಾರು ಅಫ್ಘನ್ನರಿಗೆ ಆರ್ಥಿಕ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ಅಫ್ಘಾನಿಸ್ತಾನದಲ್ಲಿ ಹಿಂದಿನ ಅಮೆರಿಕ ಬೆಂಬಲಿತ ಸರಕಾರದ ಆರ್ಥಿಕ ಸಲಹೆಗಾರರಾಗಿದ್ದ ತೊರೆಕ್ ಫರ್ಹಾದಿ ಅವರು ಬೈಡೆನ್ ರ ಆದೇಶವನ್ನು ಟೀಕಿಸಿದ್ದಾರೆ.ಅಫ್ಘಾನ್ ಸೆಂಟ್ರಲ್ ಬ್ಯಾಂಕ್ನ ನಿಧಿಯು ಅಫ್ಘಾನಿಸ್ತಾನದ ಜನತೆಗೆ ಸೇರಿದ್ದಾಗಿದೆಯೇ ಹೊರತು ತಾಲಿಬಾನ್ನದ್ದಲ್ಲ. ಬೈಡನ್ ಅವರ ನಿರ್ಧಾರವು ಏಕಪಕ್ಷೀಯವಾಗಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಲ್ಲವೆಂದು ಫರ್ಹಾದಿ ತಿಳಿಸಿದ್ದಾರೆ. ಈ ಪ್ರಪಂಚದಲ್ಲಿರುವ ಯಾವುದೇ ದೇಶ ಕೂಡಾ ಇನ್ನೊಂದು ದೇಶದ ಸಂಪತ್ತನ್ನು ವಶಪಡಿಸಿಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಫರ್ಹಾದಿ ಹೇಳಿದ್ದಾರೆ.
ಸಾಗರೋತ್ತರ ದೇಶಗಳಲ್ಲಿ ಅಫ್ಘಾನಿಸ್ತಾನವು 9 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದೆ. ಅಮೆರಿಕದಲ್ಲಿ 7 ಶತಕೋಟಿ ಡಾಲರ್ ಇದ್ದರೆ, ಉಳಿದ ಹಣ ಬಹುತೇಕವಾಗಿ ಜರ್ಮನಿ, ಯುಎಇ ಹಾಗೂ ಸ್ವಿಟ್ಛಝರ್ಲ್ಯಾಂಡ್ನಲ್ಲಿ ಇರಿಸಲಾಗಿದೆ.







