‘ಹಿಜಾಬ್' ವಿವಾದ ಕಾಂಗ್ರೆಸ್ ಸೃಷ್ಟಿಸಿದ ಕೂಸು: ಬಿಜೆಪಿ ಆರೋಪ
ಬೆಂಗಳೂರು, ಫೆ. 12: ‘ಒಂದು ಕಡೆ, ಹಿಜಾಬ್(ಸ್ಕಾರ್ಫ್) ವಿವಾದಕ್ಕೆ ತುಪ್ಪ ಸುರಿಯಲು ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವು ಮತಾಂಧರು ಸೇರಿಕೊಳ್ಳುತ್ತಾರೆ. ಇನ್ನೊಂದು ಕಡೆ, ಕೆಪಿಸಿಸಿ ಕಚೇರಿಯಿಂದಲೇ ನೇಮಕಗೊಂಡ ವಕೀಲರು ವಿವಾದದ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಹಿಜಾಬ್ ವಿವಾದ ಕಾಂಗ್ರೆಸ್ ಸೃಷ್ಟಿಸಿದ ಕೂಸು' ಎಂದು ಬಿಜೆಪಿ ಆರೋಪ ಮಾಡಿದೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಜಾಬ್ ವಿವಾದದ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಸುಳ್ಳು ಆರೋಪ ಮಾಡುವ ಸಿದ್ಧರಾಮಯ್ಯ ಅವರೇ, ನಿಮಗೆ ಸಿಎಫ್‍ಐ, ಎಸ್‍ಡಿಪಿಐ, ಪಿಎಫ್‍ಐನಂತಹ ಮೂಲಭೂತವಾದಿ ಸಂಘಟನೆಗಳ ಬಗ್ಗೆ ಮಾತನಾಡುವ ಶಕ್ತಿಯಿದೆಯೇ? ಹಿಜಾಬ್ ಒಳಗೆ ಅಡಗಿರುವ ಮತಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ? ಎಂದು ಪ್ರಶ್ನಿಸಿದೆ.
‘ಪಿಎಫ್‍ಐ ಸಂಘಟನೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧಾರ್ಮಿಕ ಮೂಲಭೂತವಾದದ ವಿಷಬೀಜ ಬಿತ್ತಿದ ಫಲವೇ ಇಂದಿನ ಹಿಜಾಬ್ ವಿವಾದ. ಇದಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಬೆಂಬಲವೂ ಇದೆ. ಇದಕ್ಕಾಗಿ ಎಲ್ಲ ರೀತಿಯ ನೆರವು ಕೆಪಿಸಿಸಿ ಕಚೇರಿಯಿಂದಲೇ ಲಭಿಸುತ್ತಿದೆ' ಎಂದು ಬಿಜೆಪಿ ದೂರಿದೆ.
‘ಹಿಜಾಬ್ ಇಲ್ಲದೆ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿನಿಯರು ಸಿಎಫ್‍ಐ ಸಂಪರ್ಕದಿಂದ ಪ್ರಚೋದನೆಗೆ ಒಳಗಾಗಿದ್ದಾರೆ. ನ್ಯಾಯಾಲಯವೇ ಇತ್ಯರ್ಥ ಪಡಿಸಿದ ಬಾಬ್ರಿ ಮಸೀದಿ ವಿವಾದದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ನ್ಯಾಯಾಂಗವನ್ನು ಅನುಮಾನಿಸುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇವರು ಅಮಾಯಕರೇ?' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಉಡುಪಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯರ ಟ್ವಿಟ್ಟರ್ ಖಾತೆಯಲ್ಲಿನ ಟ್ವೀಟ್‍ಗಳು ಸಾಮೂಹಿಕ ಸನ್ನಿಗೆ ಒಳಗಾಗಿರುವುದನ್ನು ಸ್ಪಷ್ಟಪಡಿಸುತ್ತಿವೆ. ಬಾಹ್ಯ ಶಕ್ತಿಗಳ ಪ್ರಚೋದನೆಗೊಳಗಾಗಿ ಹಿಜಾಬ್ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್, ಎಸ್‍ಡಿಪಿಐ ಈ ವಿವಾದಕ್ಕೆ ನೀರೆರೆದು ಪೋಷಿಸುತ್ತಿವೆ' ಎಂದು ಬಿಜೆಪಿ ಟೀಕಿಸಿದೆ.
ಒಂದು ಕಡೆ, ಹಿಜಾಬ್ ವಿವಾದಕ್ಕೆ ತುಪ್ಪ ಸುರಿಯಲು ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವು ಮತಾಂಧರು ಸೇರಿಕೊಳ್ಳುತ್ತಾರೆ.
— BJP Karnataka (@BJP4Karnataka) February 12, 2022
ಇನ್ನೊಂದು ಕಡೆ, ಕೆಪಿಸಿಸಿ ಕಚೇರಿಯಿಂದಲೇ ನೇಮಕಗೊಂಡ ವಕೀಲರು ವಿವಾದದ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಾರೆ.
ಹಿಜಾಬ್ ವಿವಾದ ಕಾಂಗ್ರೆಸ್ ಸೃಷ್ಟಿಸಿದ ಕೂಸು.#YesToUniform_NoToHijab pic.twitter.com/gl3yYRdaCV







