ಮುತ್ತೂಟ್ ಫೈನಾನ್ಸ್ 3025 ರೂ. ಕೋಟಿ ಲಾಭ
2022ನೇ ಹಣಕಾಸು ವರ್ಷದ 9 ತಿಂಗಳ ಹಣಕಾಸು ಫಲಿತಾಂಶ ಪ್ರಕಟ

ಮಂಗಳೂರು: ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನ ನಿರ್ವಹಣೆಯಲ್ಲಿರುವ ಕ್ರೋಢೀಕೃತ ಸಾಲ ಆಸ್ತಿ 2021ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 9ರಷ್ಟು ಹೆಚ್ಚಳ ಕಂಡಿದೆ. 2021ರಲ್ಲಿ 55,800 ಕೋಟಿ ಇದ್ದ ಕ್ರೋಢೀಕೃತ ಸಾಲ ಆಸ್ತಿ 2022ನೇ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 60,986 ಕೋಟಿಗೆ ಹೆಚ್ಚಿದೆ.
ಅಂತೆಯೇ 2022ನೇ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಕ್ರೋಢೀಕೃತ ಲಾಭ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 8ರಷ್ಟು ಏರಿಕೆ ಕಂಡು ರೂ. 3025 ಕೋಟಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮುತ್ತೂಟ್ ಫೈನಾನ್ಸ್ 2795 ಕೋಟಿ ರೂಪಾಯಿ ಕ್ರೋಢೀಕೃತ ಲಾಭ ದಾಖಲಿಸಿತ್ತು.
ಇಂದು ನಡೆದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನ ಆಡಳಿತ ಮಂಡಳಿ ಸಭೆಯಲ್ಲಿ ಪರಿಶೋಧಿತವಲ್ಲದ ಏಕೈಕ ಮತ್ತು ಕ್ರೋಢಿಕೃತ ಫಲಿತಾಂಶಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತು ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.
ಈ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಮುತ್ತೂಟ್ ಫೈನಾನ್ಸ್ ಅಧ್ಯಕ್ಷ ಶ್ರೀ ಜಾರ್ಜ್ ಜಾಕೋಬ್ ಮುತ್ತೂಟ್ ಅವರು, "ದೇಶ ಕೊರೋನಾ ವೈರಸ್‍ನ ಎರಡನೇ ಅಲೆಯ ಪರಿಣಾಮದಿಂದ ಚೇತರಿಸಿಕೊಳ್ಳಲು ಹೆಣಗಾಡು ತ್ತಿರುವಾಗಲೇ ಮೂರನೇ ಅಲೆ ಮೂರನೇ ತ್ರೈಮಾಸಿಕದಲ್ಲಿ ಮತ್ತೆ ಅಪ್ಪಳಿಸಿ ಕೋವಿಡ್ ಪೂರ್ವ ಅವಧಿಯ ಸ್ಥಿತಿಗೆ ಪುನಶ್ಚೇತನಗೊಳ್ಳುವ ಆರ್ಥಿಕ ಚಟುವಟಿಕೆ ಪ್ರಯತ್ನಗಳಿಗೆ ಬಲವಾದ ಹೊಡೆತ ನೀಡಿದೆ. ಈ ಪರಿಸ್ಥಿತಿಯ ಹೊರತಾಗಿಯೂ, ನಮ್ಮ ಕಂಪನಿಯು ಸಾಲ ವಸೂಲಾತಿಗೆ ಗಮನ ಹರಿಸುವ ಮೂಲಕ ರೂ. 60896 ಕೋಟಿ ರೂಪಾಯಿ ಕ್ರೋಢೀಕೃತ ಎಯುಎಂ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ಇದ್ದ ರೂ. 55800 ಕೋಟಿಗೆ ಹೋಲಿಸಿದರೆ ಶೇಕಡ 9ರಷ್ಟು ಎಎಂಯು ಬೆಳವಣಿಗೆ ಸಾಧ್ಯವಾಗಿದೆ. ತೆರಿಗೆ ಬಳಿಕದ ನಿವ್ವಳ ಲಾಭ ಕೂಡ ಶೇಕಡ 8ರಷ್ಟು ಹೆಚ್ಚಿ 3025 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದೀಗ ಕೋವಿಡ್ ಪಾಸಿಟಿವಿಟಿ ದರ ಇಳಿದಿದ್ದು, ದೇಶದಲ್ಲಿ ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನ ಆಶಾದಾಯಕವಾಗಿದೆ. ನಾವು ಕೂಡಾ ಚಿನ್ನದ ಸಾಲದ ಬೆಳವಣಿಗೆಯಲ್ಲಿ ಆಶಾಭಾವನೆ ಹೊಂದಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಕುಟುಂಬಗಳಲ್ಲಿ ದೊಡ್ಡ ಪ್ರಮಾಣದ ಚಿನ್ನಾಭರಣಗಳಿದ್ದು, ಚಿನ್ನದ ಸಾಲ ಉದ್ಯಮದಲ್ಲಿ ನಮ್ಮಂಥ ಕಂಪನಿಗಳಿಗೆ ಪ್ರಗತಿಯ ಅವಕಾಶ ಅತ್ಯಧಿಕವಾಗಿದೆ" ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಾರ್ಜ್ ಅಲೆಗ್ಸಾಂಡರ್ ಮುತ್ತೂಟ್ ಮಾತನಾಡಿ, "ಹಣಕಾಸು ವಲಯವು ಕೋವಿಡ್ ಸಾಂಕ್ರಾಮಿಕ ಎರಡನೇ ಅಲೆಯ ಬಳಿಕ ಮೂರನೇ ಅಲೆಯ ಕಾರಣದಿಂದ ಕೋವಿಡ್ ಬಿಗಿ ಹಿಡಿತದಲ್ಲಿ ಮುಂದುವರಿದಿರುವಂತೆಯೇ, ನಮ್ಮ ಮುಖ್ಯವಾದ ಗಮನ ಚಿನ್ನದ ಸಾಲ ವಲಯದಲ್ಲಿ ವಸೂಲಾತಿ ಕಡೆಗೆ ಇದೆ. ಈ ಪರಿಸ್ಥಿತಿಯ ಹೊರತಾಗಿಯೂ, ಈ ತ್ರೈಮಾಸಿಕದಲ್ಲಿ ಸಾಲದ ವಿತರಣೆ ಶೇಕಡ 22ರಷ್ಟು ಹೆಚ್ಚಿದೆ ಹಾಗೂ ವಸೂಲಾತಿ ಶೇಕಡ 38ರಷ್ಟು ಹೆಚ್ಚಿದೆ. ಈ ತ್ರೈಮಾಸಿಕದ ಅವಧಿಯಲ್ಲಿ 3.81 ಲಕ್ಷ ಹೊಸ ಗ್ರಾಹಕರಿಗೆ ರೂ. 4007 ಕೋಟಿ ರೂಪಾಯಿಗಳ ಹೊಸ ಸಾಲಗಳ ವಿತರಣೆ ಮಾಡಲಾಗಿದೆ. ನಿಷ್ಕ್ರಿಯ 4.98 ಲಕ್ಷ ಗ್ರಾಹಕರಿಗೆ 4426 ಕೋಟಿ ರೂಪಾಯಿ ವಿತರಿಸಲಾಗಿದೆ" ಎಂದು ಹೇಳಿದರು.
ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನ ನಿವ್ವಳ ಲಾಭ 2022ನೇ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 2994 ಕೋಟಿಗೆ ಹೆಚ್ಚಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 2726 ಕೋಟಿ ರೂಪಾಯಿ ಆಗಿತ್ತು. ಈ ಮೂಲಕ ಶೇಕಡ 10ರಷ್ಟು ಪ್ರಗತಿ ಸಾಧಿಸಿದೆ. ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 1029 ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷ ಈ ಅವಧಿಗೆ ಕಂಪನಿ 991 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 4ರಷ್ಟು ಪ್ರಗತಿ ಸಧನೆಯಾಗಿದೆ. ಸಾಲ ಆಸ್ತಿ 54,688 ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷದ ಈ ಅವಧಿಗೆ ಇದು 50391 ಕೋಟಿ ಆಗಿತ್ತು, ಮುತ್ತೂಟ್ ಹೋಮ್‍ಫಿನ್ ಇಂಡಿಯಾ ಲಿಮಿಟೆಡ್‍ನ ಸಾಲ ರೂ. 1579 ಕೋಟಿ ರೂಪಾಯಿ ಇದ್ದು, ಮೂರನೇ ತ್ರೈಮಾಸಿಕದಲ್ಲಿ 60 ಕೋಟಿ ರೂಪಾಯಿ ಹಾಗೂ ಒಂಬತ್ತು ತಿಂಗಳಲ್ಲಿ 152 ಕೋಟಿ ರೂಪಾಯಿ ಆದಾಯ ಗಳಿಸಿದೆ. ಈ ಅವಧಿಯಲ್ಲಿ ಕ್ರಮವಾಗಿ 2 ಕೋಟಿ ಹಾಗೂ 3 ಕೋಟಿ ರೂಪಾಯಿ ತೆರಿಗೆ ಬಳಿಕದ ಲಾಭ ಗಳಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.







